Mark 7 (BOKCV2)
1 ಯೆರೂಸಲೇಮಿನಿಂದ ಫರಿಸಾಯರು ಮತ್ತು ಕೆಲವು ನಿಯಮ ಬೋಧಕರು ಯೇಸುವಿನ ಬಳಿಗೆ ಬಂದರು. 2 ಆಗ ಯೇಸುವಿನ ಶಿಷ್ಯರಲ್ಲಿ ಕೆಲವರು ಅಶುದ್ಧ ಕೈಗಳಿಂದ, ಅಂದರೆ ಆಚಾರ ಪದ್ಧತಿಯಂತೆ ಕೈತೊಳೆದುಕೊಳ್ಳದೆ ಊಟಮಾಡುವುದನ್ನು ಕಂಡರು. 3 ಫರಿಸಾಯರು ಮತ್ತು ಎಲ್ಲಾ ಯೆಹೂದ್ಯರು ಆಚಾರ ಪದ್ಧತಿಯಂತೆ ತಮ್ಮ ಕೈಗಳನ್ನು ಸ್ವಚ್ಛವಾಗಿ ತೊಳೆಯದೆ ಊಟಮಾಡುವುದಿಲ್ಲ. ಹೀಗೆ ಅವರ ಪೂರ್ವಿಕರಿಂದ ಬಂದ ಸಂಪ್ರದಾಯವನ್ನು ಪಾಲಿಸುತ್ತಿದ್ದರು. 4 ಪೇಟೆಗೆ ಹೋಗಿ ಬಂದರೆ ಅವರು ಸ್ನಾನ ಮಾಡದೆ ಊಟಮಾಡುತ್ತಿರಲಿಲ್ಲ. ಮಾತ್ರವಲ್ಲದೆ ಲೋಟ, ಚೆಂಬು ಮತ್ತು ತಪ್ಪಲೆಗಳನ್ನು ಬೆಳಗಿ ತೊಳೆಯುವುದು ಮುಂತಾದ ಅನೇಕ ಶುದ್ಧಾಚಾರಗಳನ್ನು ಅವರು ಪಾಲಿಸುತ್ತಿದ್ದರು. 5 ಆದ್ದರಿಂದ ಫರಿಸಾಯರು ಮತ್ತು ನಿಯಮ ಬೋಧಕರು, “ನಿನ್ನ ಶಿಷ್ಯರು ಪೂರ್ವಿಕರ ಸಂಪ್ರದಾಯದ ಪ್ರಕಾರ ಏಕೆ ನಡೆಯುವುದಿಲ್ಲ? ಅವರು ಮೈಲಿಗೆಯಾದ ಕೈಗಳಿಂದ ಊಟಮಾಡುತ್ತಾರಲ್ಲಾ?” ಎಂದು ಯೇಸುವನ್ನು ಕೇಳಿದರು. 6 ಅದಕ್ಕೆ ಯೇಸು, “ಕಪಟಿಗಳೇ, ಯೆಶಾಯನು ನಿಮ್ಮ ವಿಷಯವಾಗಿ ಸರಿಯಾಗಿ ಪ್ರವಾದಿಸಿದ್ದಾನೆ,” ಅವನು ಬರೆದಿರುವಂತೆ:“ ‘ಈ ಜನರು ತಮ್ಮ ತುಟಿಗಳಿಂದ ನನ್ನನ್ನು ಸನ್ಮಾನಿಸುತ್ತಾರೆ.ಆದರೆ ಅವರ ಹೃದಯವು ನನ್ನಿಂದ ದೂರವಾಗಿದೆ. 7 ಮನುಷ್ಯರ ಆಜ್ಞೆಗಳನ್ನೇ ಉಪದೇಶಗಳನ್ನಾಗಿ ಬೋಧಿಸುವುದರಿಂದನನ್ನನ್ನು ವ್ಯರ್ಥವಾಗಿ ಆರಾಧಿಸುತ್ತಾರೆ.’ 8 ನೀವು ದೇವರ ಆಜ್ಞೆಯನ್ನು ತೊರೆದು, ಮನುಷ್ಯರ ಸಂಪ್ರದಾಯಗಳನ್ನು ಹಿಡಿದುಕೊಂಡಿದ್ದೀರಿ,” ಎಂದರು. 9 ಯೇಸು ಇನ್ನೂ ಅವರಿಗೆ, “ನಿಮ್ಮ ಸಂಪ್ರದಾಯಗಳನ್ನು ಪಾಲಿಸುವುದಕ್ಕಾಗಿ ಬಹು ಜಾಣತನದಿಂದ ದೇವರ ಆಜ್ಞೆಯನ್ನು ನಿರ್ಲಕ್ಷಿಸುತ್ತೀರಿ. 10 ‘ನಿಮ್ಮ ತಂದೆತಾಯಿಗಳನ್ನು ಸನ್ಮಾನಿಸಬೇಕು,’ ಮತ್ತು ‘ತಂದೆತಾಯಿಗಳನ್ನು ದೂಷಿಸುವವನಿಗೆ ಮರಣದಂಡನೆ ಆಗಬೇಕು,’ ಎಂದು ಮೋಶೆ ಹೇಳಿದ್ದಾನೆ. 11 ಆದರೆ ನೀವು, ಯಾರಾದರೂ ತನ್ನ ತಂದೆಗೆ ಇಲ್ಲವೆ ತಾಯಿಗೆ, ನಾನು ನಿಮ್ಮ ಸಹಾಯಕ್ಕಾಗಿ ಇಟ್ಟಿದ್ದನ್ನು, ‘ದೇವರಿಗೆ ಕಾಣಿಕೆಯಾಗಿ ಕೊಟ್ಟಿದ್ದೇನೆ’ ಎಂದು ಹೇಳುವುದಾದರೆ, 12 ನೀವು ಅವನನ್ನು ತನ್ನ ತಂದೆತಾಯಿಗಳಿಗೆ ಯಾವ ಸಹಾಯವನ್ನು ಮಾಡುವುದಕ್ಕೂ ಅನುಮತಿಸುವುದಿಲ್ಲ. 13 ಹೀಗೆ ನೀವು ಮಾಡುತ್ತಾ ಬಂದಿರುವ ಸಂಪ್ರದಾಯಗಳ ಮೂಲಕ ದೇವರ ವಾಕ್ಯವನ್ನು ನಿರರ್ಥಕಮಾಡುತ್ತೀರಿ. ಇಂಥ ಕಾರ್ಯಗಳನ್ನು ಇನ್ನೂ ಎಷ್ಟೋ ಮಾಡುತ್ತೀರಿ,” ಎಂದು ಹೇಳಿದರು. 14 ಯೇಸು ಜನಸಮೂಹವನ್ನು ಪುನಃ ತಮ್ಮ ಬಳಿಗೆ ಕರೆದು, “ಎಲ್ಲರೂ ನನ್ನ ಮಾತುಗಳನ್ನು ಕೇಳಿರಿ, ಅರ್ಥಮಾಡಿಕೊಳ್ಳಿರಿ. 15 ಹೊರಗಿನಿಂದ ಮನುಷ್ಯನ ಒಳಗೆ ಹೋಗುವ ಯಾವುದೂ ಅವನನ್ನು ಅಶುದ್ಧ ಮಾಡುವುದಿಲ್ಲ. ಆದರೆ ಮನುಷ್ಯನೊಳಗಿಂದ ಹೊರಗೆ ಬರುವಂಥದ್ದು ಅವನನ್ನು ಅಶುದ್ಧ ಮಾಡುತ್ತದೆ. 16 ಯಾವನಿಗಾದರೂ ಕೇಳುವುದಕ್ಕೆ ಕಿವಿಯಿದ್ದರೆ ಕೇಳಲಿ,” ಎಂದು ಹೇಳಿದರು. 17 ಆಮೇಲೆ ಯೇಸು ಜನರ ಗುಂಪನ್ನು ಬಿಟ್ಟು ಮನೆಯೊಳಗೆ ಪ್ರವೇಶಿಸಿದಾಗ, ಶಿಷ್ಯರು ಯೇಸುವಿನ ಬಳಿಗೆ ಬಂದು, ಆ ಸಾಮ್ಯದ ವಿಷಯವಾಗಿ ಪ್ರಶ್ನಿಸಿದರು. 18 ಯೇಸು ಅವರಿಗೆ, “ನೀವೂ ಇಷ್ಟು ಬುದ್ಧಿಹೀನರೋ? ಹೊರಗಿನಿಂದ ಮನುಷ್ಯನೊಳಗೆ ಹೋಗುವಂಥದ್ದು ಅವನನ್ನು ಅಶುದ್ಧ ಮಾಡುವುದಿಲ್ಲವೆಂಬುದು ನಿಮಗೆ ತಿಳಿಯದೋ? 19 ಏಕೆಂದರೆ ಅದು ಅವನ ಹೃದಯದೊಳಗೆ ಹೋಗದೆ ಹೊಟ್ಟೆಯನ್ನು ಸೇರಿ ಬಳಿಕ ವಿಸರ್ಜಿತವಾಗುತ್ತದೆ. ಹೀಗೆ ಹೇಳುವುದರ ಮೂಲಕ ಎಲ್ಲಾ ಆಹಾರ ಪದಾರ್ಥಗಳು ಶುದ್ಧವಾಗಿವೆ,” ಎಂದು ಯೇಸು ಸೂಚಿಸಿದರು. 20 ಯೇಸು ಮುಂದುವರಿದು, “ಆದರೆ ಮನುಷ್ಯನೊಳಗಿಂದ ಹೊರಡುವಂಥದ್ದು ಅವನನ್ನು ಅಶುದ್ಧ ಮಾಡುತ್ತವೆ. 21 ಮನುಷ್ಯನ ಹೃದಯದೊಳಗಿಂದ ಜಾರತ್ವ, ಕಳ್ಳತನ, ಕೊಲೆ, 22 ವ್ಯಭಿಚಾರ, ಲೋಭ, ದುಷ್ಟತ್ವ, ವಂಚನೆ, ಅಶ್ಲೀಲತೆ, ಅಸೂಯೆ, ನಿಂದೆ, ಗರ್ವ ಮತ್ತು ಮೂರ್ಖತನ ಮುಂತಾದ ದುರಾಲೋಚನೆಗಳು ಹೊರಡುತ್ತವೆ. 23 ಈ ಎಲ್ಲಾ ಕೇಡುಗಳು ಮನುಷ್ಯನ ಒಳಗಿಂದ ಹೊರಟು ಅವನನ್ನು ಅಶುದ್ಧ ಮಾಡುತ್ತವೆ,” ಎಂದರು. 24 ಯೇಸು ಆ ಸ್ಥಳವನ್ನು ಬಿಟ್ಟು ಟೈರ್ ಪಟ್ಟಣದ ಸಮೀಪವಿದ್ದ ಪ್ರದೇಶಕ್ಕೆ ಹೋದರು. ಯೇಸು ಒಂದು ಮನೆಯೊಳಗೆ ಹೋದಾಗ, ಅದು ಯಾರಿಗೂ ತಿಳಿಯಬಾರದೆಂದು ಬಯಸಿದರು. ಆದರೂ ಅವರು ಗುಟ್ಟಾಗಿರಲು ಸಾಧ್ಯವಾಗಲಿಲ್ಲ. 25 ಹೀಗೆ ಯೇಸುವಿನ ವಿಷಯ ತಿಳಿದ ಕೂಡಲೇ, ಅಶುದ್ಧಾತ್ಮಪೀಡಿತಳಾಗಿದ್ದ ಒಬ್ಬ ಚಿಕ್ಕ ಹುಡುಗಿಯ ತಾಯಿ ಬಂದು ಅವರ ಪಾದಕ್ಕೆ ಬಿದ್ದಳು. 26 ಆಕೆ, ಸಿರಿಯದ ಫೊಯಿನಿಕೆಯಲ್ಲಿ ಹುಟ್ಟಿದ ಗ್ರೀಕಳಾಗಿದ್ದಳು. ತನ್ನ ಮಗಳಿಗೆ ಹಿಡಿದಿದ್ದ ದೆವ್ವವನ್ನು ಓಡಿಸಬೇಕೆಂದು ಆಕೆ ಯೇಸುವನ್ನು ಬೇಡಿಕೊಂಡಳು. 27 ಯೇಸು ಆಕೆಗೆ, “ಮೊದಲು ಮಕ್ಕಳು ತಮಗೆ ಬೇಕಾದದ್ದನ್ನು ತಿಂದು ತೃಪ್ತಿಗೊಳ್ಳಲಿ, ಏಕೆಂದರೆ ಮಕ್ಕಳು ತಿನ್ನುವ ರೊಟ್ಟಿಯನ್ನು ನಾಯಿಮರಿಗಳಿಗೆ ಹಾಕುವುದು ಸರಿಯಲ್ಲ,” ಎಂದರು. 28 ಅದಕ್ಕೆ ಆಕೆಯು ಯೇಸುವಿಗೆ, “ಹೌದು ಸ್ವಾಮೀ, ಆದರೆ ಮೇಜಿನ ಕೆಳಗಿರುವ ನಾಯಿಮರಿಗಳು ಮಕ್ಕಳ ಕೈಯಿಂದ ಕೆಳಗೆ ಬೀಳುವ ರೊಟ್ಟಿತುಂಡುಗಳನ್ನು ತಿನ್ನುತ್ತವಲ್ಲಾ?” ಎಂದು ಉತ್ತರಕೊಟ್ಟಳು. 29 ಆಗ ಯೇಸು ಆಕೆಗೆ, “ನೀನು ಕೊಟ್ಟಿರುವ ಈ ಉತ್ತರದ ನಿಮಿತ್ತ ಮನೆಗೆ ಹಿಂದಿರುಗು, ದೆವ್ವವು ನಿನ್ನ ಮಗಳನ್ನು ಬಿಟ್ಟುಹೋಗಿದೆ,” ಎಂದರು. 30 ಆಕೆ ಮನೆಗೆ ಹೋದಾಗ, ದೆವ್ವ ಅವಳ ಮಗಳನ್ನು ಬಿಟ್ಟುಹೋಗಿತ್ತು ಮತ್ತು ಮಗಳು ಹಾಸಿಗೆಯ ಮೇಲೆ ಮಲಗಿರುವುದನ್ನು ಕಂಡಳು. 31 ಆಮೇಲೆ ಯೇಸು ಟೈರ್ ಪಟ್ಟಣದ ಸಮೀಪವಿದ್ದ ಪ್ರದೇಶದಿಂದ ಹೊರಟು ಸೀದೋನಿನ ಮಾರ್ಗವಾಗಿ ಗಲಿಲಾಯ ಸರೋವರ ತೀರವನ್ನು ಹಾದು ದೆಕಪೊಲಿ ಪ್ರದೇಶಕ್ಕೆ ಬಂದರು. 32 ಅಲ್ಲಿ ಕೆಲವರು ಮಾತನಾಡಲಾಗದ ಒಬ್ಬ ಕಿವುಡನನ್ನು ಕರೆದುಕೊಂಡು ಬಂದು ಅವನ ಮೇಲೆ ಕೈಯಿಡಬೇಕೆಂದು ಯೇಸುವನ್ನು ಬೇಡಿಕೊಂಡರು. 33 ಯೇಸು ಅವನನ್ನು ಜನರ ಗುಂಪಿನಿಂದ ಪ್ರತ್ಯೇಕವಾಗಿ ಕರೆದುಕೊಂಡು ಹೋಗಿ ತಮ್ಮ ಬೆರಳುಗಳನ್ನು ಅವನ ಕಿವಿಯೊಳಗಿಟ್ಟು ಅನಂತರ ಉಗುಳಿ, ಅವನ ನಾಲಿಗೆಯನ್ನು ಮುಟ್ಟಿದರು. 34 ಯೇಸು ಸ್ವರ್ಗದ ಕಡೆಗೆ ನೋಡಿ, ದೀರ್ಘವಾಗಿ ನಿಟ್ಟುಸಿರುಬಿಟ್ಟು ಅವನಿಗೆ “ಎಪ್ಫಥಾ!” ಎಂದರು. “ತೆರೆಯಲಿ!” ಎಂಬುದು ಅದರ ಅರಮೀಯ ಅರ್ಥ. 35 ಕೂಡಲೇ ಅವನ ಕಿವಿಗಳು ತೆರೆದವು; ಅವನ ನಾಲಿಗೆಯು ಸಡಿಲವಾಯಿತು. ಅವನು ಸ್ಪಷ್ಟವಾಗಿ ಮಾತನಾಡಲಾರಂಭಿಸಿದನು. 36 ಯಾವ ಮನುಷ್ಯನಿಗೂ ಇದನ್ನು ಹೇಳಬಾರದೆಂದು ಯೇಸು ಅವರಿಗೆ ಖಂಡಿತವಾಗಿ ಹೇಳಿದರು. ಆದರೆ ಎಷ್ಟು ಖಂಡಿತವಾಗಿ ಹೇಳಿದರೂ ಅವರು ಅದನ್ನು ಮತ್ತಷ್ಟೂ ಹೆಚ್ಚಾಗಿ ಪ್ರಚಾರಮಾಡಿದರು. 37 ಜನರು ಅತ್ಯಂತ ಆಶ್ಚರ್ಯಪಟ್ಟು, “ಯೇಸು ಎಲ್ಲಾ ಕಾರ್ಯವನ್ನು ಚೆನ್ನಾಗಿ ಮಾಡುತ್ತಾರೆ. ಕಿವುಡರು ಕೇಳುವಂತೆಯೂ ಮೂಕರು ಮಾತನಾಡುವಂತೆಯೂ ಮಾಡುತ್ತಾರೆ,” ಎಂದುಕೊಳ್ಳುತ್ತಿದ್ದರು.