Nehemiah 9 (BOKCV2)
1 ಅದೇ ತಿಂಗಳಿನ ಇಪ್ಪತ್ತನಾಲ್ಕನೆಯ ದಿವಸದಲ್ಲಿ ಇಸ್ರಾಯೇಲರು ಉಪವಾಸ ಮಾಡಿ, ಗೋಣಿತಟ್ಟನ್ನು ಉಟ್ಟುಕೊಂಡು, ತಮ್ಮ ಮೇಲೆ ಧೂಳನ್ನು ಹಾಕಿಕೊಂಡು ನೆರೆದುಬಂದರು. 2 ಆಗ ಇಸ್ರಾಯೇಲ್ ಸಂತಾನದವರು ತಮ್ಮನ್ನು ಸಮಸ್ತ ಜನರಿಂದ ಪ್ರತ್ಯೇಕಿಸಿಕೊಂಡು ನಿಂತು, ತಮ್ಮ ಪಾಪಗಳನ್ನೂ, ತಮ್ಮ ಪಿತೃಗಳ ಪಾಪಗಳನ್ನೂ ಅರಿಕೆಮಾಡಿದರು. 3 ಅವರು ತಮ್ಮ ಸ್ಥಳಗಳಲ್ಲಿ ನಿಂತು ಮೂರು ತಾಸುಗಳು ತಮ್ಮ ದೇವರಾಗಿರುವ ಯೆಹೋವ ದೇವರ ನಿಯಮದ ಗ್ರಂಥವನ್ನು ಓದಿದರು. ಮತ್ತೊಂದು ಮೂರು ತಾಸುಗಳು ತಮ್ಮ ಪಾಪಗಳನ್ನು ಅರಿಕೆಮಾಡಿ, ತಮ್ಮ ದೇವರಾಗಿರುವ ಯೆಹೋವ ದೇವರನ್ನು ಆರಾಧಿಸಿದರು. 4 ಆಗ ಮೆಟ್ಟಿಲುಗಳ ಮೇಲೆ ಲೇವಿಯರಲ್ಲಿ ಯೇಷೂವ, ಬಾನೀ, ಕದ್ಮಿಯೇಲ್, ಶೆಬನ್ಯ, ಬುನ್ನಿ, ಶೇರೇಬ್ಯ, ಬಾನೀ, ಕೆನಾನಿ ಎಂಬವರು ನಿಂತು ಮಹಾಶಬ್ದದಿಂದ ತಮ್ಮ ದೇವರಾಗಿರುವ ಯೆಹೋವ ದೇವರಿಗೆ ಮೊರೆಯಿಟ್ಟರು. 5 ಲೇವಿಯರಾದ ಯೇಷೂವ, ಕದ್ಮಿಯೇಲ್, ಬಾನೀ, ಹಷಬ್ನೆಯ, ಶೇರೇಬ್ಯ, ಹೋದೀಯ, ಶೆಬನ್ಯ, ಪೆತಹ್ಯ ಎಂಬವರು ಜನರಿಗೆ: “ಏಳಿರಿ, ಎಂದೆಂದಿಗೂ ಏಕರೀತಿಯಾಗಿರುವ ನಿಮ್ಮ ದೇವರಾಗಿರುವ ಯೆಹೋವ ದೇವರನ್ನು ಸ್ತುತಿಸಿರಿ,” ಎಂದರು.ಅನಂತರ ಅವರು, “ಯೆಹೋವ ದೇವರೇ, ಸಕಲ ಸ್ತುತಿ ಆಶೀರ್ವಾದಗಳಿಗೆ ಉನ್ನತವಾದದ್ದು ನಿಮ್ಮ ಮಹಿಮೆಯುಳ್ಳ ಹೆಸರು. 6 ನೀವು ಒಬ್ಬರೇ ದೇವರಾಗಿದ್ದೀರಿ. ನೀವು ಆಕಾಶವನ್ನೂ ಅದರ ಸಮಸ್ತ ಸೈನ್ಯವನ್ನೂ, ಭೂಮಿಯನ್ನೂ, ಅದರಲ್ಲಿರುವ ಪ್ರತಿಯೊಂದನ್ನೂ, ಸಮುದ್ರಗಳನ್ನೂ ಅದರಲ್ಲಿರುವ ಪ್ರತಿಯೊಂದನ್ನೂ ಉಂಟುಮಾಡಿದ್ದೀರಿ. ಅವುಗಳಿಗೆಲ್ಲಾ ಜೀವ ಕೊಡುವವರು ನೀವೇ. ಇದಲ್ಲದೆ ಆಕಾಶಗಳ ಸೈನ್ಯವು ನಿಮ್ಮನ್ನು ಆರಾಧಿಸುತ್ತವೆ. 7 “ನೀವು ಅಬ್ರಾಮನನ್ನು ಆಯ್ದುಕೊಂಡಿರುವ ಯೆಹೋವ ದೇವರು. ನೀವು ಅವನನ್ನು ಊರ್ ಎಂಬ ಕಸ್ದೀಯರ ಪಟ್ಟಣದಿಂದ ಹೊರಗೆ ಬರಮಾಡಿ, ಅವನಿಗೆ ಅಬ್ರಹಾಮ್ ಎಂದು ಹೆಸರಿಟ್ಟಿರಿ. 8 ಅವನ ಹೃದಯವು ನಿಮ್ಮ ಮುಂದೆ ಪ್ರಾಮಾಣಿಕವಾದದ್ದೆಂದೂ ಗುರುತಿಸಿದಿರಿ. ಕಾನಾನ್ಯರೂ, ಹಿತ್ತಿಯರೂ, ಅಮೋರಿಯರೂ, ಪೆರಿಜೀಯರೂ, ಯೆಬೂಸಿಯರೂ, ಗಿರ್ಗಾಷಿಯರೂ ಇವರ ದೇಶವನ್ನು, ಅಬ್ರಾಮನ ಸಂತಾನಕ್ಕೆ ಕೊಡುವಂತೆ ಅವನ ಸಂಗಡ ಒಡಂಬಡಿಕೆಯನ್ನು ಮಾಡಿದಿರಿ. ನೀತಿವಂತರಾದ ನೀವು ನಿಮ್ಮ ವಾಗ್ದಾನವನ್ನು ಈಡೇರಿಸಿದಿರಿ. 9 “ಇದಲ್ಲದೆ ಈಜಿಪ್ಟಿನಲ್ಲಿ ನಮ್ಮ ಪಿತೃಗಳ ದೀನಸ್ಥಿತಿಯನ್ನು ನೋಡಿದಿರಿ. ಕೆಂಪುಸಮುದ್ರದ ಬಳಿಯಲ್ಲಿ ಅವರ ಕೂಗನ್ನು ಕೇಳಿದಿರಿ. 10 ಈಜಿಪ್ಟಿನವರು ಗರ್ವಿಗಳಾಗಿ ಇಸ್ರಾಯೇಲರನ್ನು ಕುಗ್ಗಿಸಿದಾಗ, ನೀವು ಫರೋಹನ ಮೇಲೆಯೂ, ಅವನ ಸಮಸ್ತ ಅಧಿಕಾರಿಗಳ ಮೇಲೆಯೂ, ಅವನ ಸಮಸ್ತ ದೇಶದ ಜನರ ಮೇಲೆಯೂ ಸೂಚಕಕಾರ್ಯಗಳನ್ನೂ, ಅದ್ಭುತಗಳನ್ನೂ ನಡೆಸಿದಿರಿ. ಈ ಪ್ರಕಾರವೇ ನೀವು ಇಂದಿನವರೆಗೂ ನಿಮ್ಮ ಹೆಸರಿನ ಕೀರ್ತಿಯನ್ನು ಸ್ಥಾಪಿಸಿದ್ದೀರಿ. 11 ನೀವು ಜನರ ಮುಂದೆ ಸಮುದ್ರವನ್ನು ವಿಭಾಗಿಸಿದ್ದರಿಂದ, ಅವರು ಸಮುದ್ರದ ನಡುವೆ ಒಣಭೂಮಿಯಲ್ಲಿ ಹಾದುಹೋದರು. ಆದರೆ ಅವರನ್ನು ಹಿಂದಟ್ಟಿದವರನ್ನು ಅಗಾಧಗಳಲ್ಲಿ ಕಲ್ಲಿನಂತೆ ಮಹಾ ಜಲರಾಶಿಗಳಲ್ಲಿ ಮುಳುಗಿಸಿಬಿಟ್ಟಿರಿ 12 ಇದಲ್ಲದೆ ಹಗಲಿನಲ್ಲಿ ಮೇಘಸ್ತಂಭದಿಂದಲೂ, ಅವರು ನಡೆಯಬೇಕಾದ ಮಾರ್ಗದಲ್ಲಿ ಅವರಿಗೆ ಬೆಳಕಾಗುವ ಹಾಗೆ ರಾತ್ರಿಯಲ್ಲಿ ಅಗ್ನಿ ಸ್ತಂಭದಿಂದಲೂ ಅವರನ್ನು ನಡೆಸಿದಿರಿ. 13 “ನೀವು ಸೀನಾಯಿ ಪರ್ವತದ ಮೇಲಕ್ಕೆ ಇಳಿದುಬಂದು, ಆಕಾಶದಿಂದ ಅವರ ಸಂಗಡ ಮಾತನಾಡಿದಿರಿ. ಸರಿಯಾದ ನ್ಯಾಯಗಳನ್ನೂ, ಸತ್ಯವಾದ ನಿಯಮಗಳನ್ನೂ, ಉತ್ತಮವಾದ ಕಟ್ಟಳೆಗಳನ್ನೂ, ಆಜ್ಞೆಗಳನ್ನೂ ಅವರಿಗೆ ಕೊಟ್ಟಿರಿ. 14 ನೀವು ಪರಿಶುದ್ಧ ಸಬ್ಬತ್ ದಿನವನ್ನು ಅವರಿಗೆ ತಿಳಿಸಿ, ನಿಮ್ಮ ಸೇವಕನಾದ ಮೋಶೆಯ ಮುಖಾಂತರ ಅವರಿಗೆ ಆಜ್ಞೆಗಳನ್ನೂ, ಕಟ್ಟಳೆಗಳನ್ನೂ, ನಿಯಮಗಳನ್ನೂ ಕೊಟ್ಟಿರಿ. 15 ಅವರು ಹಸಿದಾಗ ಆಕಾಶದಿಂದ ಆಹಾರವನ್ನು ಕೊಟ್ಟು, ಬಾಯಾರಿದಾಗ ಬಂಡೆಯೊಳಗಿಂದ ನೀರನ್ನು ಬರಮಾಡಿದಿರಿ. ನಿಮ್ಮ ಉನ್ನತ ಹಸ್ತದಿಂದ ವಾಗ್ದಾನ ಮಾಡಿದ ದೇಶದಲ್ಲಿ ನೀವು ಅವರನ್ನು ಸೇರಿಸಿ, ಅದನ್ನು ಸ್ವಾಧೀನಮಾಡಿಕೊಳ್ಳಿರಿ ಎಂದು ಅವರಿಗೆ ಹೇಳಿದಿರಿ. 16 “ಆದರೆ ನಮ್ಮ ಪಿತೃಗಳು ಗರ್ವಪಟ್ಟು ನಡೆದು, ಹಟಮಾರಿಗಳೂ, ಕಠಿಣರೂ ಆಗಿ ನಿಮ್ಮ ಆಜ್ಞೆಗಳಿಗೆ ಅವಿಧೇಯರಾದರು. 17 ಅವರು ನಿಮ್ಮ ಸ್ವರವನ್ನು ಕೇಳದೆಯೂ, ನೀವು ಅವರ ನಡುವೆ ಮಾಡಿದ ಅದ್ಭುತಕಾರ್ಯಗಳನ್ನು ಜ್ಞಾಪಕಮಾಡದೆ ಹೋದರು. ಅವರು ತಮ್ಮ ಹೃದಯವನ್ನು ಕಠಿಣ ಮಾಡಿಕೊಂಡು, ನಿಮಗೆ ಎದುರುಬಿದ್ದು, ತಮ್ಮ ದಾಸತ್ವಕ್ಕೆ ತಿರುಗಿ ಹೋಗುವಹಾಗೆ ನಾಯಕನನ್ನು ನೇಮಿಸಿಕೊಂಡರು. ಆದರೆ ನೀವು ಮನ್ನಿಸುವ ದೇವರಾಗಿಯೂ, ಕೃಪಾಪೂರ್ಣರೂ, ಅನುಕಂಪವುಳ್ಳವರೂ, ದೀರ್ಘಶಾಂತರೂ, ಪ್ರೀತಿಯಲ್ಲಿ ಸಮೃದ್ಧರೂ ಆಗಿರುವುದರಿಂದ ಅವರನ್ನು ಕೈಬಿಡಲಿಲ್ಲ. 18 ಆದರೆ ಅವರು ತಮಗೋಸ್ಕರ ಒಂದು ಎರಕದ ಕರುವನ್ನು ಮಾಡಿಕೊಂಡರು. ‘ನಮ್ಮನ್ನು ಈಜಿಪ್ಟಿನಿಂದ ಕರೆದುಕೊಂಡು ಬಂದ ದೇವರು ಇದೇ,’ ಎಂದು ಹೇಳಿ, ನಿಮ್ಮನ್ನೇ ಬಹು ದೂಷಿಸಿ ಅಸಡ್ಡೆಮಾಡಿಬಿಟ್ಟರು. 19 “ಆದರೆ ನೀವು ನಿಮ್ಮ ಬಹು ಕರುಣೆಯಿಂದ ಮರುಭೂಮಿಯಲ್ಲಿ ಅವರನ್ನು ಕೈಬಿಡಲಿಲ್ಲ. ಹಗಲಿನಲ್ಲಿ ಅವರಿಗೆ ಮೇಘಸ್ತಂಭವು ದಾರಿ ತೋರಿಸದೆ ಇರಲಿಲ್ಲ. ರಾತ್ರಿಯಲ್ಲಿ ಅವರಿಗೆ ಬೆಳಕನ್ನೂ, ಅವರು ನಡೆಯತಕ್ಕ ಮಾರ್ಗವನ್ನೂ ತೋರಿಸುವ ಅಗ್ನಿ ಸ್ತಂಭವು ಅವರನ್ನು ಬಿಟ್ಟುಹೋಗಲಿಲ್ಲ. 20 ಇದಲ್ಲದೆ ನೀವು ಅವರಿಗೆ ಬೋಧಿಸುವ ನಿಮ್ಮ ಒಳ್ಳೆಯ ಆತ್ಮವನ್ನು ಕೊಟ್ಟಿರಿ. ಅವರ ಬಾಯಿಂದ ನಿಮ್ಮ ಮನ್ನವನ್ನು ಹಿಂದೆಗೆಯಲಿಲ್ಲ. ಬಾಯಾರಿದ ಅವರಿಗೆ ನೀರನ್ನು ಕೊಟ್ಟಿರಿ. 21 ಹೀಗೆಯೇ ಮರುಭೂಮಿಯಲ್ಲಿ ನಾಲ್ವತ್ತು ವರ್ಷ ಅವರನ್ನು ಪೋಷಿಸುತ್ತಿದ್ದಿರಿ. ಅವರಿಗೆ ಯಾವ ಕೊರತೆಯೂ ಇರಲಿಲ್ಲ. ಅವರ ವಸ್ತ್ರಗಳು ಹಳೆಯದಾಗಲಿಲ್ಲ. ಅವರ ಕಾಲುಗಳು ಬಾತುಹೋಗಲಿಲ್ಲ. 22 “ನೀವು ಅವರಿಗೆ ರಾಜ್ಯಗಳನ್ನೂ, ಜನಾಂಗಗಳನ್ನೂ ವಶಪಡಿಸಿದಿರಿ. ಅವರಿಗೆ ಮೇರೆಗಳನ್ನು ವಿಭಾಗಿಸಿ ಕೊಟ್ಟಿರಿ. ಆಗ ಅವರು, ಹೆಷ್ಬೋನಿನ ಅರಸನಾದ ಸೀಹೋನನ ದೇಶವನ್ನೂ, ಬಾಷಾನಿನ ಅರಸನಾದ ಓಗನ ದೇಶವನ್ನೂ ಸ್ವಾಧೀನಮಾಡಿಕೊಂಡರು. 23 ಇದಲ್ಲದೆ ಅವರ ಮಕ್ಕಳನ್ನು ಆಕಾಶದ ನಕ್ಷತ್ರಗಳ ಹಾಗೆ ಹೆಚ್ಚಿಸಿದಿರಿ. ಅವರು ಸ್ವಾಧೀನಮಾಡಿಕೊಳ್ಳುವರು ಎಂದು ನೀವು ಅವರ ಪಿತೃಗಳಿಗೆ ವಾಗ್ದಾನಮಾಡಿದ ದೇಶಕ್ಕೆ ಅವರನ್ನು ಬರಮಾಡಿದಿರಿ. 24 ಹಾಗೆಯೇ ಇಸ್ರಾಯೇಲರು ಹೋಗಿ, ಆ ದೇಶವನ್ನು ಸ್ವಾಧೀನಮಾಡಿಕೊಂಡರು. ನೀವು ಆ ದೇಶದ ನಿವಾಸಿಗಳಾದ ಕಾನಾನ್ಯರನ್ನು ಅವರ ಮುಂದೆ ಕುಗ್ಗಿಸಿ, ಅವರಿಗೆ ಸರಿತೋರಿದ ಪ್ರಕಾರ ಮಾಡುವುದಕ್ಕೆ ಅವರನ್ನೂ, ಅವರ ಅರಸರನ್ನೂ, ದೇಶದ ಜನರನ್ನೂ ಅವರ ಕೈಯಲ್ಲಿ ಒಪ್ಪಿಸಿಕೊಟ್ಟಿರಿ. 25 ಅವರು ಕೋಟೆ ಪಟ್ಟಣಗಳನ್ನೂ, ರಸವತ್ತಾದ ಭೂಮಿಯನ್ನೂ ವಶಪಡಿಸಿಕೊಂಡರು. ಉತ್ತಮವಾದವುಗಳಿಂದ ತುಂಬಿದ ಮನೆಗಳನ್ನೂ, ಅಗಿದ ಬಾವಿಗಳನ್ನೂ, ದ್ರಾಕ್ಷಿತೋಟಗಳನ್ನೂ, ಓಲಿವ್ ತೋಪುಗಳನ್ನೂ, ಸಮೃದ್ಧಿಯಾದ ಹಣ್ಣಿನ ಮರಗಳನ್ನೂ ಸ್ವಾಧೀನಮಾಡಿಕೊಂಡರು. ಹೀಗೆ ಅವರು ತಿಂದು ತೃಪ್ತಿಪಟ್ಟು, ಪುಷ್ಟಿಯಾಗಿ ನಿಮ್ಮ ಮಹಾ ಉಪಕಾರದಲ್ಲಿ ಆನಂದಿಸುತ್ತಿದ್ದರು. 26 “ಆದರೂ ಅವರು ನಿಮಗೆ ಅವಿಧೇಯರಾಗಿ ತಿರುಗಿಬಿದ್ದು, ನಿಮ್ಮ ನಿಯಮವನ್ನು ಉಲ್ಲಂಘಿಸಿ, ತಮ್ಮನ್ನು ಎಚ್ಚರಿಸುವುದಕ್ಕೂ, ನಿಮ್ಮ ಕಡೆಗೆ ತಿರುಗಿಸುವುದಕ್ಕೂ ಪ್ರಯತ್ನಿಸುತ್ತಿದ್ದ ನಿಮ್ಮ ಪ್ರವಾದಿಗಳನ್ನೇ ಕೊಂದುಹಾಕಿದರು. ಹೀಗೆ ನಿಮ್ಮನ್ನೇ ಬಹು ದೂಷಿಸಿ ಅಸಡ್ಡೆಮಾಡಿಬಿಟ್ಟರು. 27 ಆದ್ದರಿಂದ ನೀವು ಬಾಧಿಸುವ ವಿರೋಧಿಗಳ ಕೈಗೆ ಅವರನ್ನು ಒಪ್ಪಿಸಿದಿರಿ. ಆದರೆ ತಮ್ಮ ಇಕ್ಕಟ್ಟಿನ ಕಾಲದಲ್ಲಿ ಅವರು ನಿಮಗೆ ಮೊರೆಯಿಟ್ಟಾಗ, ನೀವು ಪರಲೋಕದಿಂದ ಕೇಳಿ, ನಿಮ್ಮ ಮಹಾ ಕರುಣೆಯ ಪ್ರಕಾರ ಅವರ ವೈರಿಗಳ ಕೈಯಿಂದ ರಕ್ಷಿಸುವುದಕ್ಕೆ ರಕ್ಷಕರನ್ನು ಅವರಿಗೆ ಕಳುಹಿಸಿದಿರಿ. 28 “ಆದರೆ ಅವರು ವಿಶ್ರಾಂತಿಯನ್ನು ಹೊಂದಿದ ತರುವಾಯ ನಿಮ್ಮ ದೃಷ್ಟಿಯಲ್ಲಿ ಕೆಟ್ಟದ್ದನ್ನು ತಿರುಗಿ ಮಾಡಿದರು. ಆದಕಾರಣ ಅವರ ಶತ್ರುಗಳು ಅವರನ್ನು ಮತ್ತೆ ಆಳುವಂತೆ ಶತ್ರು ಕೈಗೆ ಅವರನ್ನು ಒಪ್ಪಿಸಿದಿರಿ. ಆದರೆ ಅವರು ತಿರುಗಿ ನಿಮ್ಮನ್ನು ಕೂಗಿಕೊಳ್ಳಲು, ನೀವು ಪರಲೋಕದಿಂದ ಕೇಳಿ, ನಿಮ್ಮ ಅನುಕಂಪಕ್ಕೆ ಅನುಸಾರವಾಗಿ ಅವರನ್ನು ಅನೇಕ ಸಾರಿ ವಿಮೋಚಿಸಿದಿರಿ. 29 “ನೀವು ಅವರನ್ನು ನಿಮ್ಮ ನಿಯಮಕ್ಕೆ ಮರಳಿ ಬರುವ ಹಾಗೆ ಅವರನ್ನು ಎಚ್ಚರಿಸಿದಿರಿ. ಆದರೆ ಅವರು ಗರ್ವಪಟ್ಟು, ನಿಮ್ಮ ಆಜ್ಞೆಗಳನ್ನು ಅನುಸರಿಸದೆ ಹೋದರು. ನಿಮ್ಮ ವಾಕ್ಯಗಳನ್ನು ಕೈಗೊಳ್ಳುವುದರಿಂದ ಮನುಷ್ಯರು ಬದುಕುವರು ಎಂಬುದನ್ನು ಅವರು ತಿಳಿದಿದ್ದರೂ, ಆ ನಿಮ್ಮ ವಾಕ್ಯಗಳಿಗೆ ವಿರೋಧವಾಗಿ ಪಾಪಮಾಡಿ, ತಮ್ಮ ಹೃದಯವನ್ನು ಕಠಿಣಪಡಿಸಿಕೊಂಡು ನಿಮ್ಮ ಮಾತನ್ನು ಕೇಳದೆ ಹೋದರು. 30 ನೀವು ಅನೇಕ ವರ್ಷ ಅವರನ್ನು ತಾಳಿಕೊಂಡಿರಿ. ನಿಮ್ಮ ಪ್ರವಾದಿಗಳ ಮುಖಾಂತರ ನಿಮ್ಮ ಆತ್ಮನಿಂದ ಅವರನ್ನು ಎಚ್ಚರಿಸಿದಿರಿ. ಆದರೆ ಅವರು ಕಿವಿಗೊಡದೆ ಇದ್ದುದರಿಂದ ನೀವು ಅವರನ್ನು ಅನ್ಯದೇಶದವರ ಕೈಯಲ್ಲಿ ಒಪ್ಪಿಸಿದಿರಿ. 31 ಆದರೂ ನೀವು ನಿಮ್ಮ ಮಹಾ ಕರುಣೆಯಲ್ಲಿ ಅವರನ್ನು ನಾಶಮಾಡಲಿಲ್ಲ. ಅವರನ್ನು ಕೈಬಿಡಲೂ ಇಲ್ಲ. ಏಕೆಂದರೆ ನೀವು ಕೃಪೆಯೂ, ಕರುಣೆಯೂ ಉಳ್ಳ ದೇವರಾಗಿದ್ದೀರಿ. 32 “ಆದಕಾರಣ ನಮ್ಮ ದೇವರೇ, ಪ್ರೀತಿಯ ಒಡಂಬಡಿಕೆಯನ್ನು ಕೈಗೊಳ್ಳುವಂಥ ಮಹಾ ಪರಾಕ್ರಮವುಳ್ಳ ಭಯಭಕ್ತಿಗೆ ಕಾರಣರಾದ ದೇವರೇ, ಅಸ್ಸೀರಿಯದ ಅರಸರ ಕಾಲ ಮೊದಲ್ಗೊಂಡು ಇಂದಿನವರೆಗೆ ನಮ್ಮ ಮೇಲೆಯೂ, ನಮ್ಮ ಅರಸರ ಮೇಲೆಯೂ, ನಮ್ಮ ಪ್ರಧಾನರ ಮೇಲೆಯೂ, ನಮ್ಮ ಯಾಜಕರ ಮೇಲೆಯೂ, ನಮ್ಮ ಪ್ರವಾದಿಗಳ ಮೇಲೆಯೂ, ನಮ್ಮ ಪಿತೃಗಳ ಮೇಲೆಯೂ, ನಿಮ್ಮ ಸಮಸ್ತ ಜನರ ಮೇಲೆಯೂ ಬಂದ ಇವೆಲ್ಲಾ ಕಷ್ಟಸಂಕಟಗಳು ನಿಮಗೆ ಅಲ್ಪವಾಗಿ ಕಾಣದಿರಲಿ. 33 ನೀವು ನಮ್ಮ ಮೇಲೆ ಬರಮಾಡಿದ ಎಲ್ಲದರಲ್ಲಿಯೂ ನ್ಯಾಯವಂತರಾಗಿರುವಿರಿ. ಏಕೆಂದರೆ ನೀವು ಮಾಡಿದ್ದು ಸತ್ಯಕ್ಕನುಸಾರವಾದದ್ದು. ಆದರೆ ನಾವು ದುಷ್ಟರಾಗಿ ನಡೆದೆವು. 34 ನಮ್ಮ ಅರಸರೂ, ನಮ್ಮ ಪ್ರಧಾನರೂ, ನಮ್ಮ ಯಾಜಕರೂ, ನಮ್ಮ ಪಿತೃಗಳೂ ನಿಮ್ಮ ನಿಯಮವನ್ನು ಕೈಗೊಳ್ಳದೆ, ನಿಮ್ಮ ಆಜ್ಞೆಗಳನ್ನೂ, ನೀವು ಅವರಿಗೆ ಎಚ್ಚರಿಸಿದ ನಿಮ್ಮ ಎಚ್ಚರಿಕೆಗಳನ್ನೂ ಕೇಳದೆ ಹೋದರು. 35 ಅವರು ತಮ್ಮ ರಾಜ್ಯದಲ್ಲಿಯೂ, ನೀವು ಅವರಿಗೆ ಮಾಡಿದ ಮಹಾ ಉಪಕಾರದಲ್ಲಿಯೂ ನೀವು ಅವರಿಗೆ ಕೊಟ್ಟ ವಿಸ್ತಾರವಾದ, ರಸವತ್ತಾದ ದೇಶದಲ್ಲಿಯೂ, ನಿಮ್ಮನ್ನು ಸೇವಿಸಲಿಲ್ಲ. ತಮ್ಮ ಕೆಟ್ಟ ಕಾರ್ಯಗಳನ್ನು ಬಿಟ್ಟು ತಿರುಗಲೂ ಇಲ್ಲ. 36 “ಈ ದಿವಸ ನಾವು ಗುಲಾಮರಾಗಿದ್ದೇವೆ. ಅದರ ಫಲವನ್ನೂ, ಅದರ ಉತ್ತಮವಾದದ್ದನ್ನೂ ತಿನ್ನುವುದಕ್ಕೆ ನೀವು ನಮ್ಮ ಪಿತೃಗಳಿಗೆ ಕೊಟ್ಟ ದೇಶದಲ್ಲಿ ನಾವು ಗುಲಾಮರಾಗಿದ್ದೇವೆ. 37 ನಮ್ಮ ಪಾಪಗಳ ನಿಮಿತ್ತ ನೀವು ನಮ್ಮ ಮೇಲೆ ಇಟ್ಟ ಅರಸರಿಗೆ ಅದರ ಹುಟ್ಟುವಳಿ ಬಹಳವಾಗಿ ಹೋಗುತ್ತಿದೆ. ಇದಲ್ಲದೆ ಅವರು ತಮ್ಮ ಇಚ್ಛೆಯ ಪ್ರಕಾರ ನಮ್ಮ ಮೇಲೆಯೂ, ನಮ್ಮ ಪಶುಗಳ ಮೇಲೆಯೂ ಆಳುತ್ತಾರೆ. ನಾವು ಬಹು ಇಕ್ಕಟ್ಟಿನಲ್ಲಿದ್ದೇವೆ. 38 “ಇದೆಲ್ಲದರ ನಿಮಿತ್ತ ನಾವು ಒಡಂಬಡಿಕೆಯನ್ನು ಸ್ಥಿರಮಾಡಿ ಬರೆಯುತ್ತೇವೆ. ನಮ್ಮ ಪ್ರಧಾನರೂ, ಲೇವಿಯರೂ, ಯಾಜಕರೂ ಅದಕ್ಕೆ ಮುದ್ರೆ ಹಾಕುತ್ತಾರೆ,” ಎಂದು ಪ್ರಾರ್ಥಿಸಿದರು.