Acts 16 (IRVK)
1 ಅನಂತರ ಅವನು ದೆರ್ಬೆಗೂ, ಲುಸ್ತ್ರಕ್ಕೂ ಬಂದನು. ಲುಸ್ತ್ರದಲ್ಲಿ ತಿಮೊಥೆಯನೆಂಬ ಒಬ್ಬ ಶಿಷ್ಯನಿದ್ದನು. ಅವನು ಕ್ರಿಸ್ತನನ್ನು ನಂಬಿದ್ದ ಒಬ್ಬ ಯೆಹೂದ್ಯ ಸ್ತ್ರೀಯ ಮಗನು. ಅವನ ತಂದೆ ಗ್ರೀಕನು. 2 ಅವನು ಲುಸ್ತ್ರದಲ್ಲಿಯೂ, ಇಕೋನ್ಯದಲ್ಲಿಯೂ ಇದ್ದ ಸಹೋದರರಿಂದ ಒಳ್ಳೆಯ ಸಾಕ್ಷಿಯನ್ನು ಹೊಂದಿದ್ದವನು. 3 ಅವನು ತನ್ನ ಸಂಗಡ ಬರಬೇಕೆಂದು ಪೌಲನು ಅಪೇಕ್ಷಿಸಿ ಆ ಸ್ಥಳಗಳಲ್ಲಿದ್ದ ಯೆಹೂದ್ಯರ ನಿಮಿತ್ತವಾಗಿ ಅವನಿಗೆ ಸುನ್ನತಿ ಮಾಡಿಸಿದನು, ಏಕೆಂದರೆ ಅವನ ತಂದೆ ಗ್ರೀಕನೆಂಬುದು ಎಲ್ಲರಿಗೂ ತಿಳಿದ ಸಂಗತಿಯಾಗಿತ್ತು. 4 ಬಳಿಕ ಅವರು ಊರೂರುಗಳಲ್ಲಿ ಸಂಚಾರಮಾಡುತ್ತಿರುವಾಗ ಯೆರೂಸಲೇಮಿನಲ್ಲಿದ್ದ ಅಪೊಸ್ತಲರೂ, ಸಭೆಯ ಹಿರಿಯರೂ ನಿರ್ಣಯಿಸಿದ್ದ ವಿಧಿಗಳನ್ನು ಅವರಿಗೆ ತಿಳಿಸಿ ಅವುಗಳನ್ನು ನೀವು ಅನುಸರಿಸಿ ನಡೆಯಬೇಕೆಂದು ಬೋಧಿಸಿದರು. 5 ಸಭೆಗಳು ಕ್ರಿಸ್ತ ನಂಬಿಕೆಯಲ್ಲಿ ದೃಢವಾಗುತ್ತಾ ಸಂಖ್ಯೆಯಲ್ಲಿ ದಿನೇ ದಿನೇ ಹೆಚ್ಚುತ್ತಾ ಬಂದವು. 6 ಆಸ್ಯಸೀಮೆಯಲ್ಲಿ ವಾಕ್ಯವನ್ನು ಹೇಳಬಾರದೆಂದು ಪವಿತ್ರಾತ್ಮನು ತಡೆದ್ದುದರಿಂದ ಅವರು ಫ್ರುಗ್ಯ, ಗಲಾತ್ಯ ಸೀಮೆಯನ್ನು ಹಾದುಹೋಗಿ, 7 ಮೂಸ್ಯಕ್ಕೆ ಹತ್ತಿರವಾಗಿ ಬಂದಾಗ, ಬಿಥೂನ್ಯಕ್ಕೆ ಹೋಗುವ ಪ್ರಯತ್ನಮಾಡಿದರು. ಅಲ್ಲಿಯೂ ಯೇಸುವಿನ ಆತ್ಮನು ಅವರನ್ನು ಹೋಗಗೊಡಿಸಲಿಲ್ಲ. 8 ಆಗ ಅವರು ಮೂಸ್ಯದ ಮುಖಾಂತಾರವಾಗಿ ತ್ರೋವಕ್ಕೆ ಬಂದರು. 9 ಆ ರಾತ್ರಿ ಪೌಲನಿಗೆ ಒಂದು ದರ್ಶನವಾಯಿತು, ಏನೆಂದರೆ, ಮಕೆದೋನ್ಯ ದೇಶದವನಾದ ಒಬ್ಬ ಮನುಷ್ಯನು ನಿಂತುಕೊಂಡು; “ನೀನು ಸಮುದ್ರವನ್ನು ದಾಟಿ ಮಕೆದೋನ್ಯಕ್ಕೆ ಬಂದು ನಮಗೆ ನೆರವಾಗಬೇಕೆಂದು” ಅವನನ್ನು ಬೇಡಿಕೊಳ್ಳುತ್ತಿದ್ದನು. 10 ಅವನಿಗೆ ಆ ದರ್ಶನವಾದ ಮೇಲೆ, ಆ ಸೀಮೆಯವರಿಗೆ ಸುವಾರ್ತೆಯನ್ನು ಸಾರುವುದಕ್ಕೆ ದೇವರು ನಮ್ಮನ್ನು ಕರೆದಿದ್ದಾನೆಂದು ನಾವು ನಿಶ್ಚಯಿಸಿಕೊಂಡು, ಕೂಡಲೆ ಮಕೆದೋನ್ಯಕ್ಕೆ ಹೊರಟುಹೋಗುವ ಪ್ರಯತ್ನಮಾಡಿದೆವು. 11 ನಾವು ತ್ರೋವದಿಂದ ಸಮುದ್ರ ಪ್ರಯಾಣಮಾಡಿ ನೆಟ್ಟಗೆ ಸಮೊಥ್ರಾಕೆಗೆ ಬಂದು ಮರುದಿನ ನೆಯಾಪೊಲಿಗೆ ಸೇರಿ ಅಲ್ಲಿಂದ ಫಿಲಿಪ್ಪಿಯನ್ನು ತಲುಪಿದೆವು. 12 ಫಿಲಿಪ್ಪಿ ಎಂಬುದು ಮಕೆದೋನ್ಯದಲ್ಲಿ ಪ್ರಧಾನ ಪಟ್ಟಣ, ಇದು ರೋಮಾಪುರದವರ ಒಂದು ಪ್ರವಾಸ ಸ್ಥಾನವೂ ಆಗಿದೆ. ಈ ಪಟ್ಟಣದಲ್ಲಿ ನಾವು ಕೆಲವು ದಿನಗಳ ಕಾಲ ಇದ್ದೆವು. 13 ನದೀತೀರದಲ್ಲಿ ದೇವರ ಪ್ರಾರ್ಥನೆ ನಡೆಯುವ ಸ್ಥಳ ಇರುವುದೆಂದು ತಿಳಿದು ಸಬ್ಬತ್ ದಿನದಲ್ಲಿ ಊರ ಬಾಗಿಲಿನ ಹೊರಗೆ ಹೋಗಿ ಅಲ್ಲಿ ಕೂಡಿಬಂದಿದ್ದ ಸ್ತ್ರೀಯರ ಸಂಗಡ ಕುಳಿತುಕೊಂಡು ಮಾತನಾಡಿದೆವು. 14 ನಮ್ಮ ಮಾತುಗಳನ್ನು ಕೇಳಿದವರಲ್ಲಿ ಲುದ್ಯಳೆಂಬ ಒಬ್ಬ ಸ್ತ್ರೀಯು ಇದ್ದಳು. ಆಕೆ ಧೂಮ್ರ (ನೇರಳೆ) ಬಣ್ಣದ ವಸ್ತ್ರಗಳನ್ನು ಮಾರುವವಳೂ, ಥುವತೈರ ಎಂಬ ಊರಿನವಳೂ, ದೈವಭಕ್ತಳೂ ಆಗಿದ್ದಳು. ಪೌಲನು ಹೇಳುವ ಮಾತುಗಳಿಗೆ ಗಮನಕೊಡುವುದಕ್ಕಾಗಿ ಕರ್ತನು ಆಕೆಯ ಹೃದಯವನ್ನು ತೆರೆದನು. 15 ಆಕೆಯೂ, ಆಕೆಯ ಮನೆಯವರೂ ದೀಕ್ಷಾಸ್ನಾನ ಮಾಡಿಸಿಕೊಂಡ ಮೇಲೆ, ಆಕೆ; “ಕರ್ತನನ್ನು ನಂಬಿದವಳೆಂದು ನೀವು ನನ್ನ ಬಗ್ಗೆ ನಿಶ್ಚಯಿಸಿಕೊಂಡಿದ್ದರೆ ನನ್ನ ಮನೆಯಲ್ಲಿ ಬಂದು ಉಳಿದುಕೊಳ್ಳಬೇಕೆಂದು” ಬೇಡಿಕೊಂಡು ನಮ್ಮನ್ನು ಬಲವಂತ ಮಾಡಿದಳು. 16 ಬಳಿಕ ಪ್ರಾರ್ಥನೆ ನಡೆಯುವ ಆ ಸ್ಥಳಕ್ಕೆ ನಾವು ಹೋಗುತ್ತಿರುವಾಗ ಗಾರುಡಗಾತಿಯಾದ ಒಬ್ಬ ದಾಸಿಯು ನಮ್ಮೆದುರಿಗೆ ಬಂದಳು. ಅವಳು ಕಣಿ ಹೇಳುವುದರಿಂದ ಅವಳ ಯಜಮಾನರಿಗೆ ಬಹು ಆದಾಯವಾಗುತ್ತಿತ್ತು. 17 ಪೌಲನೂ, ನಾವೂ ಹೋಗುತ್ತಿರುವಾಗ ಅವಳು ನಮ್ಮ ಹಿಂದೆ ಬಂದು; “ಈ ಮನುಷ್ಯರು ಪರಾತ್ಪರನಾದ ದೇವರ ಸೇವಕರು; ನಿಮಗೆ ರಕ್ಷಣೆಯ ಮಾರ್ಗವನ್ನು ಸಾರುತ್ತಾರೆ” ಎಂದು ಕೂಗಿ ಹೇಳುತ್ತಿದ್ದಳು. 18 ಅನೇಕ ದಿನ ಅವಳು ಹೀಗೆ ಮಾಡುತ್ತಿದ್ದುದರಿಂದ ಪೌಲನು ಬಹಳವಾಗಿ ಬೇಸರಗೊಂಡು ಹಿಂತಿರುಗಿ ಅವಳೊಳಗಿದ್ದ ದುರಾತ್ಮಕ್ಕೆ; “ಅವಳನ್ನು ಬಿಟ್ಟುಹೋಗು ಎಂದು ಯೇಸು ಕ್ರಿಸ್ತನ ಹೆಸರಿನಲ್ಲಿ ನಿನಗೆ ಆಜ್ಞಾಪಿಸುತ್ತೇನೆ” ಎಂದು ಹೇಳಿದನು. ಅದೇ ಗಳಿಗೆಯಲ್ಲಿಯೇ ಅದು ಬಿಟ್ಟು ಹೋಯಿತು. 19 ಅವಳ ಯಜಮಾನರು ತಮ್ಮ ಆದಾಯದ ನಿರೀಕ್ಷೆ ತಪ್ಪಿತಲ್ಲಾ ಎಂದು ತಿಳಿದು ಪೌಲನನ್ನೂ ಮತ್ತು ಸೀಲನನ್ನೂ ಹಿಡಿದು ಮಾರುಕಟ್ಟೆಯ ಸ್ಥಳಕ್ಕೆ ಅಧಿಕಾರಿಗಳ ಬಳಿಗೆ ಎಳೆದುಕೊಂಡು ಹೋದರು. 20 ಅವರನ್ನು ಅಧಿಕಾರಿಗಳ ಮುಂದೆ ತಂದು; “ಈ ಮನುಷ್ಯರು ನಮ್ಮ ಪಟ್ಟಣವನ್ನು ಬಹಳವಾಗಿ ಕದಡುತ್ತಿದ್ದಾರೆ; 21 ಇವರು ಯೆಹೂದ್ಯರಾಗಿದ್ದು ರೋಮನ್ನರಾದ ನಾವು ಅವಲಂಬಿಸಿ ಆಚರಿಸಬಾರದ ಆಚಾರಗಳನ್ನು ಪ್ರಚಾರ ಮಾಡುತ್ತಿದ್ದಾರೆ” ಅಂದರು. 22 ಆಗ ಜನರು ಗುಂಪಾಗಿ ಕೂಡಿ, ಅವರಿಗೆ ವಿರೋಧವಾಗಿ ಒಟ್ಟಾಗಿ ಎದ್ದರು. ಮತ್ತು ಅಧಿಕಾರಿಗಳು; ಇವರ ವಸ್ತ್ರಗಳನ್ನು ಹರಿದು, ತೆಗೆದು, ಛಡಿಗಳಿಂದ ಹೊಡೆಸಬೇಕೆಂದು ಅಪ್ಪಣೆಕೊಟ್ಟರು. 23 ಅವರಿಗೆ ಬಹಳ ಹೊಡೆತಗಳನ್ನು ಹೊಡಿಸಿದ ಮೇಲೆ ಸೆರೆಮನೆಯೊಳಗೆ ಹಾಕಿಸಿ, ಇವರನ್ನು ಭದ್ರವಾಗಿ ಕಾಯಬೇಕೆಂದು ಸೆರೆಯ ಯಜಮಾನನಿಗೆ ಆಜ್ಞಾಪಿಸಿದರು. 24 ಅವನು ಇಂಥಾ ಅಪ್ಪಣೆಯನ್ನು ಹೊಂದಿ ಅವರನ್ನು ಸೆರೆಮನೆಯ ಒಳಕೋಣೆಯಲ್ಲಿ ಹಾಕಿ ಅವರ ಕಾಲುಗಳಿಗೆ ಕೋಳವನ್ನು ಹಾಕಿ ಬಿಗಿಸಿದನು. 25 ಮಧ್ಯರಾತ್ರಿಯಲ್ಲಿ ಪೌಲನೂ ಮತ್ತು ಸೀಲನೂ ಪ್ರಾರ್ಥನೆಮಾಡುತ್ತಾ ದೇವರಿಗೆ ಸ್ತುತಿಗೀತೆಗಳನ್ನು ಹಾಡುತ್ತಿದ್ದರು; ಸೆರೆಯಲ್ಲಿದ್ದವರು ಲಕ್ಷ್ಯವಿಟ್ಟು ಕೇಳುತ್ತಿದ್ದರು. 26 ಆಕಸ್ಮಾತ್ತಾಗಿ ಮಹಾಭೂಕಂಪವುಂಟಾಯಿತು; ಸೆರೆಮನೆಯ ಅಸ್ತಿವಾರಗಳು ಕದಲಿದವು. ಅದೇ ಕ್ಷಣದಲ್ಲಿ ಕದಗಳೆಲ್ಲಾ ತೆರೆದವು, ಎಲ್ಲರ ಬೇಡಿಗಳು ಕಳಚಿಬಿದ್ದವು. 27 ಸೆರೆಯ ಯಜಮಾನನು ನಿದ್ದೆಯಿಂದ ಎಚ್ಚೆತ್ತು ಸೆರೆಮನೆಯ ಕದಗಳು ತೆರೆದಿರುವುದನ್ನು ಕಂಡು ಸೆರೆಯಲ್ಲಿದ್ದವರು ಓಡಿಹೋದರೆಂದು ಭಾವಿಸಿ ಕತ್ತಿಯನ್ನು ಹಿರಿದು ಆತ್ಮಹತ್ಯೆ ಮಾಡಿಕೊಳ್ಳಬೇಕೆಂದಿದ್ದನು. 28 ಆದರೆ ಪೌಲನು ಮಹಾ ಶಬ್ದದಿಂದ ಕೂಗಿ ಅವನಿಗೆ; “ನೀನೇನೂ ಕೇಡುಮಾಡಿಕೊಳ್ಳಬೇಡ, ನಾವೆಲ್ಲರೂ ಇಲ್ಲೇ ಇದ್ದೇವೆ” ಎಂದು ಹೇಳಿದನು. 29 ಆಗ ಅವನು; ದೀಪ ತರಬೇಕೆಂದು ಕೂಗಿ ಒಳಕ್ಕೆ ಹಾರಿ ಭಯದಿಂದ ನಡುಗುತ್ತಾ ಪೌಲ ಮತ್ತು ಸೀಲರ ಮುಂದೆ ಆಡ್ಡಬಿದ್ದನು. 30 ಮತ್ತು ಅವರನ್ನು ಹೊರಗೆ ಕರೆದುಕೊಂಡು ಬಂದು; “ಸ್ವಾಮಿಗಳೇ, ನಾನು ರಕ್ಷಣೆಹೊಂದುವುದಕ್ಕೆ ಏನು ಮಾಡಬೇಕೆಂದು?” ಕೇಳಲು, 31 ಅವರು; “ಕರ್ತನಾದ ಯೇಸುವಿನ ಮೇಲೆ ನಂಬಿಕೆಯಿಡು, ಆಗ ನೀನು ರಕ್ಷಣೆ ಹೊಂದುವಿ, ನಿನ್ನ ಮನೆಯವರೂ ರಕ್ಷಣೆಹೊಂದುವರು” ಎಂದು ಹೇಳಿ, 32 ಅವನಿಗೂ, ಅವನ ಮನೆಯಲ್ಲಿದ್ದವರೆಲ್ಲರಿಗೂ ದೇವರ ವಾಕ್ಯವನ್ನು ತಿಳಿಸಿದರು. 33 ಆ ಮೇಲೆ ಅವನು ರಾತ್ರಿಯ ಅದೇ ಗಳಿಗೆಯಲ್ಲಿ ಅವರನ್ನು ಕರೆದುಕೊಂಡು ಹೋಗಿ ಅವರ ಗಾಯಗಳನ್ನು ತೊಳೆದು ಕೂಡಲೆ ತಾನೂ ತನ್ನವರೆಲ್ಲರ ಸಹಿತವಾಗಿ ದೀಕ್ಷಾಸ್ನಾನ ಮಾಡಿಸಿಕೊಂಡನು. 34 ತರುವಾಯ ಅವರನ್ನು ತನ್ನ ಮನೆಗೆ ಕರೆದುಕೊಂಡು ಹೋಗಿ ಊಟಮಾಡಿಸಿದನು. ಅವನು ತನ್ನ ಮನೆಯವರೆಲ್ಲರ ಸಂಗಡ ದೇವರನ್ನು ನಂಬಿ ಸಂತೋಷಪಟ್ಟರು. 35 ಬೆಳಗಾದ ಮೇಲೆ ಅಧಿಕಾರಿಗಳು; “ಆ ಮನುಷ್ಯರನ್ನು ಬಿಟ್ಟುಬಿಡು” ಎಂದು ಸಿಪಾಯಿಗಳ ಮೂಲಕ ಹೇಳಿ ಕಳುಹಿಸಿದರು. 36 ಸೆರೆಮನೆಯ ಯಜಮಾನನು ಈ ಮಾತನ್ನು ಪೌಲನಿಗೆ ತಿಳಿಸಿ; “ಅಧಿಕಾರಿಗಳು ನಿಮ್ಮನ್ನು ಬಿಟ್ಟುಬಿಡಬೇಕೆಂದು ಹೇಳಿಕಳುಹಿಸಿದ್ದಾರೆ, ಆದುದರಿಂದ ಈಗ ನೀವು ಸಮಾಧಾನದಿಂದ ಹೊರಟುಹೋಗಿರಿ” ಎಂದು ಹೇಳಿದನು. 37 ಅದಕ್ಕೆ ಪೌಲನು; “ಅವರು ವಿಚಾರಣೆಮಾಡದೆ ರೋಮಾಪುರದ ಹಕ್ಕುದಾರರಾದ ನಮ್ಮನ್ನು ಎಲ್ಲರ ಮುಂದೆ ಹೊಡಿಸಿ ಸೆರೆಮನೆಯೊಳಗೆ ಹಾಕಿಸಿದರು; ಈಗ ನಮ್ಮನ್ನು ಗುಪ್ತವಾಗಿ ಹೊರಗೆ ಕಳುಹಿಸುತ್ತಾರೋ? ಹಾಗೆ ಎಂದಿಗೂ ಆಗಕೂಡದು; ಅವರೇ ಬಂದು ನಮ್ಮನ್ನು ಹೊರಗೆ ಕರದುಕೊಂಡುಹೋದರೆ ಸರಿ” ಎಂದು ಹೇಳಿದನು. 38 ಸಿಪಾಯಿಗಳು ಈ ಮಾತುಗಳನ್ನು ಅಧಿಕಾರಿಗಳಿಗೆ ತಿಳಿಸಿದಾಗ ರೋಮಾಪುರದ ಹಕ್ಕುದಾರರು ಎಂಬ ಮಾತನ್ನು ಕೇಳಿದಾಗ ಅವರು ಭಯಪಟ್ಟರು. 39 ಪೌಲ ಮತ್ತು ಸೀಲರ ಬಳಿಗೆ ಹೋಗಿ ವಿನಯವಾಗಿ ಮಾತನಾಡಿ ಅವರನ್ನು ಹೊರಕ್ಕೆ ಕರೆದುಕೊಂಡು ಬಂದು; ನೀವು ಊರನ್ನು ಬಿಟ್ಟುಹೋಗಬೇಕೆಂದು ಬೇಡಿಕೊಂಡರು. 40 ಆಗ ಅವರು ಸೆರೆಮನೆಯೊಳಗಿಂದ ಹೊರಟು ಲುದ್ಯಳ ಮನೆಗೆ ಬಂದು ಸಹೋದರರನ್ನು ನೋಡಿ ಅವರನ್ನು ಧೈರ್ಯಗೊಳಿಸಿ ಅಲ್ಲಿಂದ ಹೊರಟುಹೋದರು.