Mark 11 (IRVK)
1 ಅವರು ಯೆರೂಸಲೇಮಿಗೆ ಸಮೀಪಿಸಿ ಬೆತ್ಫಗೆ ಹಾಗೂ ಬೇಥಾನ್ಯದ ಬಳಿಯಲ್ಲಿರುವ ಎಣ್ಣೆಮರಗಳ ಗುಡ್ಡಕ್ಕೆ ಬಂದಾಗ ಆತನು ತನ್ನ ಶಿಷ್ಯರಲ್ಲಿ ಇಬ್ಬರನ್ನು ಕರೆದು, 2 “ನಿಮ್ಮೆದುರಿಗಿರುವ ಹಳ್ಳಿಗೆ ಹೋಗಿರಿ; ಅದರೊಳಗೆ ಸೇರುತ್ತಿರುವಾಗಲೇ ಅಲ್ಲಿ ಕಟ್ಟಿರುವ ಒಂದು ಕತ್ತೆಮರಿಯನ್ನು ಕಾಣುವಿರಿ; ಇದುವರೆಗೂ ಅದರ ಮೇಲೆ ಯಾರೂ ಸವಾರಿ ಮಾಡಿಲ್ಲ; ಅದನ್ನು ಬಿಚ್ಚಿ ಇಲ್ಲಿಗೆ ತನ್ನಿರಿ. 3 ಯಾರಾದರೂ ನಿಮ್ಮನ್ನು, ‘ಅದನ್ನೇಕೆ ಬಿಚ್ಚುತ್ತೀರಿ?’ ಎಂದು ಕೇಳಿದರೆ, ‘ಇದು ಕರ್ತನಿಗೆ ಅಗತ್ಯವಾಗಿದೆ’ ಅನ್ನಿರಿ, ಅವರು ಬೇಗನೆ ಅದನ್ನು ಕಳುಹಿಸಿಕೊಡುವರು” ಎಂದು ಹೇಳಿ ಕಳುಹಿಸಿದನು. 4 ಆ ಶಿಷ್ಯರು ಹೋಗಿ ಬೀದಿಯಲ್ಲಿ ಹೊರಗೆ ಬಾಗಿಲಿನ ಹತ್ತಿರ ಕತ್ತೆಮರಿಯನ್ನು ಕಟ್ಟಿರುವುದನ್ನು ಕಂಡು ಅದನ್ನು ಬಿಚ್ಚಿದರು. 5 ಅಲ್ಲಿ ನಿಂತಿದ್ದವರಲ್ಲಿ ಕೆಲವರು, “ಈ ಕತ್ತೆಮರಿಯನ್ನು ಏಕೆ ಬಿಚ್ಚುತ್ತೀರಿ?” ಎಂದು ಅವರನ್ನು ಕೇಳಿದರು. 6 ಅದಕ್ಕೆ ಯೇಸು ಹೇಳಿದಂತೆಯೇ ಅವರು ಹೇಳಿದರು ಆಗ ಜನರು ಅದನ್ನು ತೆಗೆದುಕೊಂಡು ಹೋಗಲು ಬಿಟ್ಟುಕೊಟ್ಟರು. 7 ಶಿಷ್ಯರು ಆ ಕತ್ತೆಮರಿಯನ್ನು ಯೇಸುವಿನ ಬಳಿಗೆ ತಂದು ತಮ್ಮ ಮೇಲಂಗಿಗಳನ್ನು ಅದರ ಮೇಲೆ ಹಾಕಲು ಆತನು ಅದನ್ನು ಹತ್ತಿ ಕುಳಿತುಕೊಂಡನು. 8 ಆಗ ಅನೇಕರು ತಮ್ಮ ಮೇಲಂಗಿಗಳನ್ನು ದಾರಿಯಲ್ಲಿ ಹಾಸಿದರು. ಬೇರೆ ಕೆಲವರು ತೋಟಗಳಿಂದ ಎಳೆಯ ರೆಂಬೆಗಳನ್ನು ಕಡಿದು, ತಂದು ಹಾಸಿದರು. 9 ಯೇಸುವಿನ ಹಿಂದೆ ಹಾಗೂ ಮುಂದೆ ಹೋಗುತ್ತಿದ್ದವರು:“ಹೊಸನ್ನ, ಕರ್ತನ ಹೆಸರಿನಲ್ಲಿ ಬರುವವನಿಗೆ ಆಶೀರ್ವಾದ; 10 ನಮ್ಮ ಪಿತೃವಾದ ದಾವೀದನ ರಾಜ್ಯವು ಬರುತ್ತದೆ, ಅದಕ್ಕೆ ಆಶೀರ್ವಾದವುಂಟಾಗಲಿ;ಮೇಲಣ ಲೋಕಗಳಲ್ಲಿ ಹೊಸನ್ನ” ಎಂದು ಆರ್ಭಟಿಸಿದರು. 11 ತರುವಾಯ ಯೇಸು ಯೆರೂಸಲೇಮನ್ನು ಸೇರಿ ದೇವಾಲಯದೊಳಗೆ ಹೋಗಿ ಸುತ್ತಲೂ ನೋಡಿದನು, ಅಷ್ಟರಲ್ಲಿ ಸಂಜೆಯಾದದ್ದರಿಂದ ಹನ್ನೆರಡು ಮಂದಿ ಶಿಷ್ಯರನ್ನು ಕರೆದುಕೊಂಡು ಬೇಥಾನ್ಯಕ್ಕೆ ಹೊರಟು ಹೋದನು. 12 ಮರುದಿನ ಅವರು ಬೇಥಾನ್ಯವನ್ನು ಬಿಟ್ಟು ಬರುತ್ತಿರುವಾಗ ಆತನಿಗೆ ಹಸಿವಾಯಿತು. 13 ಎಲೆಗಳಿದ್ದ ಅಂಜೂರದ ಮರವನ್ನು ದೂರದಿಂದ ಕಂಡು ಅದರಲ್ಲಿ ತನಗೇನಾದರೂ ಹಣ್ಣು ಸಿಕ್ಕೀತೆಂದು ಅಲ್ಲಿಗೆ ಹೋದನು. ಅದರ ಹತ್ತಿರಕ್ಕೆ ಬಂದಾಗ ಅದರಲ್ಲಿ ಬರೀ ಎಲೆಗಳನ್ನೇ ಹೊರತು ಮತ್ತೇನೂ ಕಾಣಲಿಲ್ಲ; ಏಕೆಂದರೆ ಅದು ಅಂಜೂರದ ಹಣ್ಣಿನ ಕಾಲವಾಗಿರಲಿಲ್ಲ. 14 ಆಗ ಯೇಸು ಆ ಮರಕ್ಕೆ, “ಇನ್ನೆಂದಿಗೂ ಒಬ್ಬರೂ ನಿನ್ನಲ್ಲಿ ಹಣ್ಣನ್ನು ತಿನ್ನದಿರಲಿ” ಎಂದು ಹೇಳಿದನು. ಆತನ ಶಿಷ್ಯರು ಅದನ್ನು ಕೇಳಿಸಿಕೊಂಡರು. 15 ಅವರು ಯೆರೂಸಲೇಮಿಗೆ ಬಂದಾಗ ಯೇಸು ದೇವಾಲಯಕ್ಕೆ ಹೋಗಿ ಅದರಲ್ಲಿ ಮಾರುತ್ತಿದ್ದವರನ್ನೂ, ಕೊಳ್ಳುತ್ತಿದ್ದವರನ್ನೂ ಹೊರಡಿಸಿಬಿಡುವುದಕ್ಕೆ ತೊಡಗಿದನು; ನಾಣ್ಯಗಳನ್ನು ವಿನಿಮಯಮಾಡುತ್ತಿದ್ದ ವ್ಯಾಪಾರಿಗಳ ಮೇಜುಗಳನ್ನು ಕೆಡವಿಹಾಕಿದನು; ಪಾರಿವಾಳಗಳನ್ನು ಮಾರುವವರ ಮಣೆಗಳನ್ನು ಉರುಳಿಸಿದನು; 16 ಒಬ್ಬನನ್ನಾದರೂ ಸಾಮಾನುಗಳನ್ನು ಹೊತ್ತುಕೊಂಡು ದೇವಾಲಯದೊಳಕ್ಕೆ ಹಾದು ಹೋಗಗೊಡಿಸಲಿಲ್ಲ. 17 ಮತ್ತು ಆತನು ಉಪದೇಶಮಾಡಿ, “‘ನನ್ನ ಆಲಯವು ಎಲ್ಲಾ ಜನಾಂಗಗಳಿಗೂ ಪ್ರಾರ್ಥನಾಲಯವೆನಿಸಿಕೊಳ್ಳುವುದು’ ಎಂದು ಬರೆದಿದೆಯಲ್ಲಾ? ಆದರೆ ‘ನೀವು ಅದನ್ನು ಕಳ್ಳರ ಗವಿಯನ್ನಾಗಿ ಮಾಡಿದ್ದೀರಿ’”ಎಂದು ಹೇಳಿದನು. 18 ಅದನ್ನು ಮುಖ್ಯಯಾಜಕರೂ, ಶಾಸ್ತ್ರಿಗಳೂ ಕೇಳಿ ಅವನನ್ನು ಯಾವ ಉಪಾಯದಿಂದ ಕೊಲ್ಲೋಣ ಎಂದು ಕಾದು ನೋಡುತ್ತಿದ್ದರು; ಏಕೆಂದರೆ ಜನರೆಲ್ಲರೂ ಆತನ ಉಪದೇಶವನ್ನು ಕೇಳಿ ಅತ್ಯಾಶ್ಚರ್ಯಪಟ್ಟಿದ್ದರಿಂದ ಅವರು ಆತನಿಗೆ ಹೆದರುತ್ತಿದ್ದರು. 19 ಸಂಜೆಯಾದಾಗ ಯೇಸುವೂ, ಆತನ ಶಿಷ್ಯರೂ ಪಟ್ಟಣವನ್ನು ಬಿಟ್ಟು ಹೊರಗೆ ಹೋಗುತ್ತಿದ್ದರು. 20 ಬೆಳಗ್ಗೆ ಅವರು ಬರುತ್ತಿರುವಾಗ ಆ ಅಂಜೂರದ ಮರವು ಬೇರುಸಹಿತ ಒಣಗಿಹೋಗಿರುವುದನ್ನು ಕಂಡರು. 21 ಆಗ ಪೇತ್ರನು ಹಿಂದಿನ ದಿನದ ಸಂಗತಿಯನ್ನು ನೆನಪಿಸಿಕೊಂಡು ಆತನಿಗೆ, “ಗುರುವೇ, ಇಗೋ, ನೀನು ಶಾಪ ಕೊಟ್ಟ ಅಂಜೂರದ ಮರವು ಒಣಗಿಹೋಗಿದೆ” ಎಂದು ಹೇಳಿದ್ದಕ್ಕೆ 22 ಯೇಸು ಹೇಳಿದ್ದೇನಂದರೆ, “ನಿಮಗೆ ದೇವರಲ್ಲಿ ನಂಬಿಕೆಯಿರಲಿ. 23 ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ, ಯಾರಾದರೂ ಈ ಬೆಟ್ಟಕ್ಕೆ, ‘ನೀನು ಕಿತ್ತುಕೊಂಡು ಹೋಗಿ ಸಮುದ್ರದಲ್ಲಿ ಬೀಳು!’ ಎಂದು ಹೇಳಿ ತನ್ನ ಮನಸ್ಸಿನಲ್ಲಿ ಸಂಶಯಪಡದೆ ತಾನು ಹೇಳಿದ್ದು ಆಗುವುದೆಂದು ನಂಬಿದರೆ ಅವನು ಹೇಳಿದಂತೆಯೇ ಆಗುವುದು. 24 ಆದಕಾರಣ ನೀವು ಪ್ರಾರ್ಥನೆಮಾಡಿ ಏನೇನು ಬೇಡಿಕೊಳ್ಳುತ್ತೀರೋ ಅದನ್ನೆಲ್ಲಾ ಹೊಂದಿದ್ದೇವೆಂದು ನಂಬಿರಿ; ಅದು ನಿಮಗೆ ಸಿಕ್ಕುವುದೆಂದು ನಿಮಗೆ ಹೇಳುತ್ತೇನೆ. 25 ಇದಲ್ಲದೆ ನೀವು ನಿಂತುಕೊಂಡು ಪ್ರಾರ್ಥಿಸುವಾಗ ಯಾರ ಮೇಲೆ ಏನಾದರೂ ವಿರೋಧವಿದ್ದರೆ ಅದನ್ನು ಕ್ಷಮಿಸಿರಿ; ಆಗ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವನು” ಅಂದನು. 26 ಆದರೆ ನೀವು ಕ್ಷಮಿಸದಿದ್ದರೆ ಪರಲೋಕದಲ್ಲಿರುವ ನಿಮ್ಮ ತಂದೆಯು ಸಹ ನಿಮ್ಮ ತಪ್ಪುಗಳನ್ನು ಕ್ಷಮಿಸುವುದಿಲ್ಲ. 27 ಅವರು ಪುನಃ ಯೆರೂಸಲೇಮಿಗೆ ಬಂದಾಗ ಯೇಸು ದೇವಾಲಯದ ಆವರಣದಲ್ಲಿ ನಡೆದಾಡುತ್ತಿರಲಾಗಿ ಮುಖ್ಯಯಾಜಕರೂ, ಶಾಸ್ತ್ರಿಗಳೂ, ಹಿರಿಯರೂ ಆತನ ಬಳಿಗೆ ಬಂದು, 28 “ನೀನು ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೀ? ಇದನ್ನು ಮಾಡುವುದಕ್ಕೆ ಈ ಅಧಿಕಾರವನ್ನು ನಿನಗೆ ಕೊಟ್ಟವರು ಯಾರು?” ಎಂದು ಆತನನ್ನು ಕೇಳಿದರು. 29 ಯೇಸು ಅವರಿಗೆ, “ನಾನೂ ನಿಮಗೆ ಒಂದು ಪ್ರಶ್ನೆಯನ್ನು ಕೇಳುತ್ತೇನೆ, ನನಗೆ ಉತ್ತರ ಹೇಳಿದರೆ ನಾನೂ ಸಹ ಯಾವ ಅಧಿಕಾರದಿಂದ ಇದನ್ನು ಮಾಡುತ್ತೇನೆಂಬುದನ್ನು ನಿಮಗೆ ಹೇಳುತ್ತೇನೆ. 30 ದೀಕ್ಷಾಸ್ನಾನ ಮಾಡಿಸುವ ಅಧಿಕಾರವು ಯೋಹಾನನಿಗೆ ಪರಲೋಕದಿಂದ ಬಂದಿತೋ ಅಥವಾ ಮನುಷ್ಯರಿಂದ ಬಂದಿತೋ?” ಉತ್ತರಕೊಡಿರಿ ಅಂದನು. 31 ಆಗ ಅವರು, “‘ಪರಲೋಕದಿಂದ ಬಂದಿತೆಂದು’ ನಾವು ಹೇಳಿದರೆ, ‘ಹಾಗಾದರೆ ನೀವೇಕೆ ಅವನನ್ನು ನಂಬಲಿಲ್ಲ’ ಅಂದಾನು; 32 ‘ಮನುಷ್ಯರಿಂದ ಬಂದಿತು’” ಎಂದು ಹೇಳಿದರೆ ಏನಾಗುವುದೋ ಎಂಬುದಾಗಿ ಎಂದು ತಮ್ಮತಮ್ಮೊಳಗೆ ಚರ್ಚಿಸಿಕೊಳ್ಳುತ್ತಿದ್ದರು. ಯೋಹಾನನು ನಿಜವಾದ ಪ್ರವಾದಿಯೆಂದು ಜನರೆಲ್ಲರೂ ಅನುಮಾನವಿಲ್ಲದೆ ತಿಳಿದುಕೊಂಡಿದ್ದರಿಂದ ಇವರಿಗೆ ಜನರ ಭಯವಿತ್ತು. 33 ಹೀಗಿರಲಾಗಿ ಅವರು, “ನಮಗೆ ಗೊತ್ತಿಲ್ಲ” ಎಂದು ಯೇಸುವಿಗೆ ಉತ್ತರಕೊಟ್ಟರು. ಆಗ ಯೇಸು ಅವರಿಗೆ, “ನಾನೂ ಕೂಡ ಯಾವ ಅಧಿಕಾರದಿಂದ ಇದನ್ನೆಲ್ಲಾ ಮಾಡುತ್ತೇನೆಂದು ನಿಮಗೆ ಹೇಳುವುದಿಲ್ಲ” ಅಂದನು.