John 7 (BOKCV2)
1 ಇವುಗಳಾದ ಮೇಲೆ ಯೇಸು ಗಲಿಲಾಯದ ಪ್ರಾಂತದಲ್ಲಿ ಸಂಚಾರ ಮಾಡಿದರು. ಯೆಹೂದ್ಯರು ಯೇಸುವನ್ನು ಕೊಲ್ಲುವುದಕ್ಕೆ ಹುಡುಕುತ್ತಿದ್ದುದರಿಂದ ಯೂದಾಯದಲ್ಲಿ ಸಂಚರಿಸಲು ಅವರು ಇಷ್ಟಪಡಲಿಲ್ಲ. 2 ಆಗ ಯೆಹೂದ್ಯರ ಗುಡಾರಗಳ ಹಬ್ಬವು ಹತ್ತಿರವಾಗಿತ್ತು. 3 ಆದ್ದರಿಂದ ಯೇಸುವಿನ ಸಹೋದರರು, “ನೀನು ಮಾಡುವ ಕ್ರಿಯೆಗಳನ್ನು ನಿನ್ನ ಶಿಷ್ಯರು ಸಹ ನೋಡುವಂತೆ ಇಲ್ಲಿಂದ ಹೊರಟು ಯೂದಾಯಕ್ಕೆ ಹೋಗು. 4 ಏಕೆಂದರೆ ಪ್ರಖ್ಯಾತನಾಗಲು ಬಯಸುವ ಯಾರೂ ರಹಸ್ಯವಾಗಿ ಯಾವುದನ್ನೂ ಮಾಡುವುದಿಲ್ಲ. ನೀನು ಇವುಗಳನ್ನು ಮಾಡುವುದಾದರೆ, ಲೋಕಕ್ಕೆ ನಿನ್ನನ್ನು ನೀನೇ ತೋರ್ಪಡಿಸಿಕೋ,” ಎಂದು ಯೇಸುವಿಗೆ ಹೇಳಿದರು. 5 ಏಕೆಂದರೆ ಯೇಸುವಿನ ಸಹೋದರರು ಸಹ ಅವರನ್ನು ನಂಬಲಿಲ್ಲ. 6 ಅದಕ್ಕೆ ಯೇಸು ಅವರಿಗೆ, “ನನ್ನ ಸಮಯವು ಇನ್ನೂ ಬಂದಿಲ್ಲ. ನಿಮ್ಮ ಸಮಯವು ಯಾವಾಗಲೂ ಸಿದ್ಧವಾಗಿದೆ. 7 ಲೋಕವು ನಿಮ್ಮನ್ನು ದ್ವೇಷಿಸಲಾರದು. ಲೋಕದ ಕ್ರಿಯೆಗಳು ಕೆಟ್ಟವುಗಳಾಗಿವೆ ಎಂದು ಅದರ ವಿಷಯದಲ್ಲಿ ನಾನು ಸಾಕ್ಷಿ ಹೇಳುವುದರಿಂದ, ಅದು ನನ್ನನ್ನು ದ್ವೇಷಿಸುತ್ತದೆ. 8 ನೀವು ಈ ಹಬ್ಬಕ್ಕೆ ಹೋಗಿರಿ. ನಾನು ಈ ಹಬ್ಬಕ್ಕೆ ಹೋಗುವುದಿಲ್ಲ. ಏಕೆಂದರೆ ನನ್ನ ಸಮಯವು ಇನ್ನೂ ಪೂರ್ಣವಾಗಿ ಬರಲಿಲ್ಲ,” ಎಂದರು. 9 ಯೇಸು ಈ ಮಾತುಗಳನ್ನು ಅವರಿಗೆ ಹೇಳಿದ ಮೇಲೆ ಗಲಿಲಾಯದಲ್ಲಿಯೇ ಉಳಿದರು. 10 ಆದರೆ ಯೇಸುವಿನ ಸಹೋದರರು ಹಬ್ಬಕ್ಕೆ ಹೋದರು. ಯೇಸು ಸಹ ಬಹಿರಂಗವಾಗಿ ಹೋಗದೆ ರಹಸ್ಯವಾಗಿ ಅಲ್ಲಿಗೆ ಹೋದರು. 11 ಯೆಹೂದ್ಯರು ಆ ಹಬ್ಬದಲ್ಲಿ, “ಆ ಮನುಷ್ಯನು ಎಲ್ಲಿ?” ಎಂದು ಹುಡುಕುತ್ತಿದ್ದರು. 12 ಜನರ ಗುಂಪುಗಳಲ್ಲಿ ಯೇಸುವಿನ ವಿಷಯವಾಗಿ ಬಹಳ ಗೊಣಗುಟ್ಟುವಿಕೆ ಇತ್ತು. ಏಕೆಂದರೆ ಕೆಲವರು, “ಆತ ಒಳ್ಳೆಯ ಮನುಷ್ಯ,” ಎಂದರು.ಬೇರೆ ಕೆಲವರು, “ಇಲ್ಲ ಆತ ಜನರಿಗೆ ಮೋಸಮಾಡುತ್ತಾನೆ,” ಎಂದರು. 13 ಆದರೂ ಯೆಹೂದ್ಯರ ಭಯದ ನಿಮಿತ್ತ ಯೇಸುವಿನ ವಿಷಯದಲ್ಲಿ ಯಾರೂ ಬಹಿರಂಗವಾಗಿ ಮಾತನಾಡಲಿಲ್ಲ. 14 ಯೇಸು ಆ ಹಬ್ಬದ ಮಧ್ಯದಲ್ಲಿ ದೇವಾಲಯಕ್ಕೆ ಹೋಗಿ ಬೋಧಿಸಿದರು. 15 ಯೆಹೂದ್ಯರು ಆಶ್ಚರ್ಯಪಟ್ಟು, “ಏನನ್ನೂ ಕಲಿಯದಿರುವ ಈ ಮನುಷ್ಯನಿಗೆ ಇಷ್ಟೆಲ್ಲಾ ಜ್ಞಾನ ತಿಳಿದಿರುವುದು ಹೇಗೆ?” ಎಂದರು. 16 ಅದಕ್ಕೆ ಯೇಸು ಅವರಿಗೆ, “ನನ್ನ ಬೋಧನೆಯು ನನ್ನದಲ್ಲ, ನನ್ನನ್ನು ಕಳುಹಿಸಿದ ತಂದೆಯದೇ ಆಗಿದೆ. 17 ಯಾರಾದರೂ ದೇವರ ಚಿತ್ತವನ್ನು ಮಾಡಬಯಸುವುದಾದರೆ ಈ ಬೋಧನೆಯು ದೇವರದೋ ಅಥವಾ ನನ್ನಷ್ಟಕ್ಕೆ ನಾನೇ ಮಾತನಾಡುತ್ತೇನೋ ಎಂಬುದು ಅವರಿಗೆ ತಿಳಿಯುವುದು. 18 ತಮ್ಮಷ್ಟಕ್ಕೆ ತಾವೇ ಮಾತನಾಡುವವರು ತಮ್ಮ ಸ್ವಂತ ಮಹಿಮೆಯನ್ನು ಹುಡುಕುತ್ತಾರೆ. ಆದರೆ ತನ್ನನ್ನು ಕಳುಹಿಸಿದ ತಂದೆಯ ಮಹಿಮೆಯನ್ನು ಹುಡುಕುವ ಮನುಷ್ಯನು ಸತ್ಯವಂತನು; ಆತನಲ್ಲಿ ಅನೀತಿಯಿಲ್ಲ. 19 ಮೋಶೆಯು ನಿಮಗೆ ನಿಯಮವನ್ನು ಕೊಡಲಿಲ್ಲವೇ? ಆದರೂ ನಿಮ್ಮಲ್ಲಿ ಯಾರೂ ಆ ನಿಯಮದಂತೆ ನಡೆಯುವುದಿಲ್ಲ. ನೀವು ನನ್ನನ್ನು ಕೊಲ್ಲಲು ಹುಡುಕುವುದೇಕೆ?” ಎಂದು ಕೇಳಿದರು. 20 ಅದಕ್ಕೆ ಜನರು, “ನಿನಗೆ ದೆವ್ವ ಹಿಡಿದಿದೆ. ನಿನ್ನನ್ನು ಕೊಲ್ಲುವುದಕ್ಕೆ ಹುಡುಕುವವರು ಯಾರು?” ಎಂದರು. 21 ಯೇಸು ಅವರಿಗೆ, “ನಾನು ಒಂದು ಕ್ರಿಯೆಯನ್ನು ಮಾಡಿದೆನು. ಅದಕ್ಕೆ ನೀವೆಲ್ಲರೂ ಆಶ್ವರ್ಯಪಡುತ್ತೀರಿ. 22 ಮೋಶೆ ನಿಮಗೆ ಸುನ್ನತಿಯನ್ನು ಇದಕ್ಕಾಗಿಯೇ ಕೊಟ್ಟನು. ಅದು ಮೋಶೆಯಿಂದಾಗಿರದೆ ನಿಮ್ಮ ಪಿತೃಗಳಿಂದಾದದ್ದು. ಆದರೆ ನೀವು ಸಬ್ಬತ್ ದಿನದಲ್ಲಿಯೂ ಸುನ್ನತಿ ಮಾಡುತ್ತೀರಿ. 23 ಮೋಶೆಯ ನಿಯಮವನ್ನು ಉಲ್ಲಂಘಿಸದೆ ನೀವು ಸಬ್ಬತ್ ದಿನದಲ್ಲಿ ಒಬ್ಬನಿಗೆ ಸುನ್ನತಿಯನ್ನು ಮಾಡುವುದಾದರೆ ನಾನು ಒಬ್ಬ ಮನುಷ್ಯನನ್ನು ಸಬ್ಬತ್ ದಿನದಲ್ಲಿ ಸಂಪೂರ್ಣವಾಗಿ ಸ್ವಸ್ಥಮಾಡಿದ್ದಕ್ಕೆ ನನ್ನ ಮೇಲೆ ನೀವು ಏಕೆ ಕೋಪಗೊಳ್ಳುತ್ತೀರಿ? 24 ತೋರಿಕೆಗೆ ಅನುಸಾರವಾಗಿ ತೀರ್ಪುಮಾಡಬೇಡಿರಿ. ಆದರೆ ನೀತಿಯ ತೀರ್ಪನ್ನು ಮಾಡಿರಿ,” ಎಂದರು. 25 ಆಮೇಲೆ ಯೆರೂಸಲೇಮಿನ ಕೆಲವರು, “ಅವರು ಕೊಲ್ಲಬೇಕೆಂದು ಹುಡುಕುವುದು ಈತನನ್ನೇ ಅಲ್ಲವೇ? 26 ಇಗೋ, ಈತನು ಬಹಿರಂಗವಾಗಿ ಮಾತನಾಡುತ್ತಿದ್ದಾನೆ. ಆದರೆ ಅವರು ಈತನಿಗೆ ಏನೂ ಹೇಳುವುದಿಲ್ಲ. ಬಹುಶಃ ಈತನೇ ನಿಜವಾದ ಕ್ರಿಸ್ತ ಎಂದು ಅಧಿಕಾರಿಗಳು ತಿಳಿದುಕೊಂಡಿದ್ದಾರೋ? 27 ಆದರೆ ಈತನು ಎಲ್ಲಿಂದ ಬಂದವನೆಂದು ನಾವು ಬಲ್ಲೆವು. ಆದರೂ ಕ್ರಿಸ್ತನು ಬಂದಾಗ ಆತನು ಎಲ್ಲಿಂದ ಬಂದವನೆಂದು ಯಾರಿಗೂ ತಿಳಿಯದು,” ಎಂದರು. 28 ದೇವಾಲಯದಲ್ಲಿ ಬೋಧಿಸುತ್ತಿದ್ದ ಯೇಸು, “ನೀವು ನನ್ನನ್ನು ಬಲ್ಲಿರಿ, ನಾನು ಎಲ್ಲಿಂದ ಬಂದವನೆಂದೂ ನೀವು ಬಲ್ಲಿರಿ. ನಾನು ನನ್ನಷ್ಟಕ್ಕೆ ನಾನೇ ಬಂದವನಲ್ಲ. ನನ್ನನ್ನು ಕಳುಹಿಸಿದ ತಂದೆಯು ಸತ್ಯವಂತರು. ತಂದೆಯನ್ನು ನೀವು ಅರಿತವರಲ್ಲ. 29 ನಾನಾದರೋ ಅವರನ್ನು ಅರಿತಿದ್ದೇನೆ. ಏಕೆಂದರೆ ನಾನು ಅವರ ಕಡೆಯಿಂದ ಬಂದವನು. ಅವರೇ ನನ್ನನ್ನು ಕಳುಹಿಸಿಕೊಟ್ಟಿದ್ದಾರೆ,” ಎಂದು ಗಟ್ಟಿಯಾಗಿ ಕೂಗಿ ಹೇಳಿದರು. 30 ಆಗ ಅವರು ಯೇಸುವನ್ನು ಬಂಧಿಸಲು ಪ್ರಯತ್ನಿಸಿದರು. ಆದರೆ ಅವರ ಸಮಯ ಇನ್ನೂ ಬಾರದೆ ಇದ್ದುದರಿಂದ ಅವರ ಮೇಲೆ ಯಾರೂ ಕೈಹಾಕಲಿಲ್ಲ. 31 ಜನರಲ್ಲಿ ಅನೇಕರು ಯೇಸುವನ್ನು ನಂಬಿ, “ಕ್ರಿಸ್ತನು ಬಂದಾಗ ಈತನು ಮಾಡಿದ್ದಕ್ಕಿಂತ ಹೆಚ್ಚು ಸೂಚಕಕಾರ್ಯಗಳನ್ನು ಮಾಡುವನೋ?” ಎಂದರು. 32 ಯೇಸುವಿನ ವಿಷಯವಾಗಿ ಜನರು ತಮ್ಮತಮ್ಮೊಳಗೆ ಮಾತನಾಡುವುದನ್ನು ಫರಿಸಾಯರು ಕೇಳಿದರು. ಫರಿಸಾಯರು ಮತ್ತು ಮುಖ್ಯಯಾಜಕರು ಯೇಸುವನ್ನು ಬಂಧಿಸಲು ಕಾವಲುಗಾರರನ್ನು ಕಳುಹಿಸಿದರು. 33 ಯೇಸು ಅವರಿಗೆ, “ಇನ್ನು ಸ್ವಲ್ಪಕಾಲ ನಾನು ನಿಮ್ಮೊಂದಿಗಿದ್ದು ಅನಂತರ ನನ್ನನ್ನು ಕಳುಹಿಸಿದ ತಂದೆಯ ಬಳಿಗೆ ಹೋಗುತ್ತೇನೆ. 34 ನೀವು ನನ್ನನ್ನು ಹುಡುಕುವಿರಿ. ಆದರೆ ನನ್ನನ್ನು ಕಾಣುವುದಿಲ್ಲ; ನಾನಿರುವಲ್ಲಿಗೆ ನೀವು ಬರಲಾರಿರಿ,” ಎಂದರು. 35 ಆಗ ಯೆಹೂದಿ ನಾಯಕರು, “ನಾವು ಈತನನ್ನು ಕಾಣದ ಹಾಗೆ ಈತ ಎಲ್ಲಿಗೆ ಹೋಗಲಿದ್ದಾನೆ? ಗ್ರೀಕರ ನಡುವೆ ಚದರಿ ಹೋದವರ ಬಳಿಗೆ ಹೋಗಿ ಗ್ರೀಕರಿಗೆ ಬೋಧಿಸುವನೋ? 36 ಈತನು, ‘ನೀವು ನನ್ನನ್ನು ಹುಡುಕುವಿರಿ, ಆದರೆ ನನ್ನನ್ನು ಕಾಣುವುದಿಲ್ಲ ಮತ್ತು ನಾನಿರುವಲ್ಲಿಗೆ ನೀವು ಬರಲಾರಿರಿ,’ ಎಂದು ಹೇಳಿದ ಮಾತು ಏನಾಗಿರಬಹುದು?” ಎಂದು ತಮ್ಮೊಳಗೆ ಮಾತನಾಡಿಕೊಂಡರು. 37 ಹಬ್ಬದ ಆ ಮಹಾದಿವಸವಾದ ಕಡೆಯ ದಿನದಲ್ಲಿ ಯೇಸು ನಿಂತುಕೊಂಡು, “ಯಾರಿಗಾದರೂ ಬಾಯಾರಿಕೆಯಾಗಿದ್ದರೆ ಅವರು ನನ್ನ ಬಳಿಗೆ ಬಂದು ಕುಡಿಯಲಿ. 38 ಪವಿತ್ರ ವೇದವು ಹೇಳಿದ ಪ್ರಕಾರ ನನ್ನಲ್ಲಿ ನಂಬಿಕೆಯಿಡುವವರ ಅಂತರಂಗದಿಂದ ಜೀವಜಲದ ಹೊಳೆಗಳು ಹರಿಯುವವು,” ಎಂದು ಕೂಗಿ ಹೇಳಿದರು. 39 ಆದರೆ ಯೇಸು ತಮ್ಮಲ್ಲಿ ನಂಬಿಕೆಯಿಡುವವರು ಹೊಂದಲಿರುವ ಪವಿತ್ರಾತ್ಮರನ್ನು ಕುರಿತು ಹೀಗೆ ಹೇಳಿದರು. ಯೇಸು ಇನ್ನೂ ಮಹಿಮೆ ಹೊಂದಿರಲಿಲ್ಲ. ಈ ಕಾರಣದಿಂದ ಪವಿತ್ರ ಆತ್ಮ ಇನ್ನೂ ಬಂದಿರಲಿಲ್ಲ. 40 ಆದ್ದರಿಂದ ಜನರಲ್ಲಿ ಕೆಲವರು ಈ ಮಾತನ್ನು ಕೇಳಿದಾಗ, “ಈತನು ನಿಜವಾಗಿಯೂ ಪ್ರವಾದಿಯಾಗಿದ್ದಾನೆ,” ಎಂದರು. 41 ಬೇರೆಯವರು, “ಈತನೇ ಕ್ರಿಸ್ತನು,” ಎಂದರು.ಆದರೆ ಇನ್ನೂ ಕೆಲವರು, “ಕ್ರಿಸ್ತನು ಗಲಿಲಾಯದಿಂದ ಬರುವುದು ಹೇಗೆ? 42 ‘ಕ್ರಿಸ್ತನು ದಾವೀದನ ಸಂತಾನದಿಂದಲೂ ದಾವೀದನಿದ್ದ ಬೇತ್ಲೆಹೇಮೆಂಬ ಊರಿನಿಂದಲೂ ಬರುವನು,’ ಎಂದು ಪವಿತ್ರ ವೇದವು ಹೇಳುತ್ತದಲ್ಲವೇ?” ಎಂದರು. 43 ಹೀಗೆ ಯೇಸುವಿನ ನಿಮಿತ್ತವಾಗಿ ಜನರಲ್ಲಿ ಭೇದ ಉಂಟಾಯಿತು. 44 ಅವರಲ್ಲಿ ಕೆಲವರು ಯೇಸುವನ್ನು ಬಂಧಿಸಬೇಕೆಂದಿದ್ದರು. ಆದರೆ ಯಾರೂ ಯೇಸುವಿನ ಮೇಲೆ ಕೈಹಾಕಲಿಲ್ಲ. 45 ಬಳಿಕ ಕಾವಲುಗಾರರು, ಮುಖ್ಯಯಾಜಕರ ಹಾಗೂ ಫರಿಸಾಯರ ಬಳಿಗೆ ಬಂದಾಗ ಅವರು, “ನೀವು ಏಕೆ ಆತನನ್ನು ಹಿಡಿದು ತರಲಿಲ್ಲ?” ಎಂದು ಕೇಳಿದರು. 46 ಅದಕ್ಕೆ ಕಾವಲುಗಾರರು, “ಯಾವ ಮನುಷ್ಯನೂ ಎಂದೂ ಈತನು ಮಾತನಾಡುವಂತೆ ಮಾತನಾಡಿದ್ದಿಲ್ಲ,” ಎಂದರು. 47 ಆಗ ಫರಿಸಾಯರು ಅವರಿಗೆ, “ನೀವು ಸಹ ಮರುಳಾದೀರಾ? 48 ಅಧಿಕಾರಿಗಳಲ್ಲಿಯೂ ಫರಿಸಾಯರಲ್ಲಿಯೂ ಯಾರಾದರೂ ಯೇಸುವನ್ನು ನಂಬಿದ್ದುಂಟೇ? 49 ಆದರೆ ಮೋಶೆಯ ನಿಯಮವನ್ನು ಅರಿಯದ ಈ ಜನರು ಶಾಪಗ್ರಸ್ತರೇ,” ಎಂದು ಹೇಳಿದರು. 50 ಯೇಸುವಿನ ಬಳಿಗೆ ಒಮ್ಮೆ ಬಂದಿದ್ದ ನಿಕೊದೇಮನು ಅವರಲ್ಲಿ ಒಬ್ಬನಾಗಿದ್ದನು. ಅವನು ಅವರಿಗೆ, 51 “ಒಬ್ಬ ಮನುಷ್ಯನನ್ನು ಮೊದಲು ವಿಚಾರಿಸಿ, ಅವನು ಮಾಡುವುದೇನೆಂದು ತಿಳಿದುಕೊಳ್ಳದೆ ನಮ್ಮ ನಿಯಮವು ಅವನಿಗೆ ತೀರ್ಪುಮಾಡುವುದುಂಟೇ?” ಎಂದನು. 52 ಅವರು ಅವನಿಗೆ, “ನೀನು ಸಹ ಗಲಿಲಾಯದವನೋ? ಗಲಿಲಾಯದಿಂದ ಒಬ್ಬ ಪ್ರವಾದಿಯೂ ಏಳುವುದಿಲ್ಲ, ನೀನೇ ಪರಿಶೋಧಿಸಿ ನೋಡು,” ಎಂದರು. 53 ಬಳಿಕ ಎಲ್ಲರೂ ತಮ್ಮ ತಮ್ಮ ಮನೆಗೆ ಹೋದರು.