Romans 15 (IRVK)
1 ದೃಢವಾದ ನಂಬಿಕೆಯುಳ್ಳವರಾದ ನಾವು ಬಲಹೀನರಾದವರ ಭಾರಗಳನ್ನು ಹೊರುವುದಲ್ಲದೆ ಅದರಲ್ಲಿ ನಮ್ಮನ್ನು ನಾವೇ ಹೊಗಳಿಕೊಳ್ಳಬಾರದು. 2 ನಮ್ಮಲ್ಲಿ ಪ್ರತಿಯೊಬ್ಬನು ತನ್ನ ನೆರೆಯವನ ಹಿತವನ್ನೂ, ಭಕ್ತಿವೃದ್ಧಿಯನ್ನೂ ಅಪೇಕ್ಷಿಸುವವನಾಗಿ ಅವನನ್ನು ಮೆಚ್ಚಿಸಬೇಕು. 3 ಯಾಕೆಂದರೆ ಕ್ರಿಸ್ತನು ಸಹ ತನ್ನ ಹಿತಕ್ಕಾಗಿ ಚಿಂತಿಸಲಿಲ್ಲ. “ದೇವರೇ ನಿನ್ನನ್ನು ದೂಷಿಸಿದವರ ದೂಷಣೆಗಳು ನನ್ನ ಮೇಲೂ ಬಂದವು” ಎಂದು ಬರೆದಿದೆಯಲ್ಲಾ. 4 ಈ ಮೊದಲು ಬರೆದದ್ದೆಲ್ಲಾ ನಮ್ಮನ್ನು ಉಪದೇಶಿಸುವುದಕ್ಕಾಗಿ ಬರೆಯಲ್ಪಟ್ಟಿತು. ನಾವು ಓದಿ ಸ್ಥಿರಚಿತ್ತವನ್ನೂ, ಆದರಣೆಯನ್ನೂ ಹೊಂದಿ ರಕ್ಷಣೆಯ ನಿರೀಕ್ಷೆಯುಳ್ಳವರಾಗಿರುವಂತೆ ಆ ಶಾಸ್ತ್ರಗಳು ಬರೆಯಲ್ಪಟ್ಟವು. 5 ಆ ಸ್ಥಿರಚಿತ್ತವನ್ನೂ, ಆದರಣೆಯನ್ನೂ ಕೊಡುವ ದೇವರು ನೀವು ಕ್ರಿಸ್ತ ಯೇಸುವನ್ನು ಅನುಸರಿಸಿ ಒಂದೇ ಮನಸ್ಸುಳ್ಳವರಾಗಿರುವಂತೆ ನಿಮ್ಮನ್ನು ಆಶೀರ್ವದಿಸಲಿ. 6 ಹೀಗೆ ನೀವು ಏಕಮನಸ್ಸಿನಿಂದ ಒಕ್ಕೊರಳಿನಿಂದ ನಮ್ಮ ಕರ್ತನಾದ ಯೇಸು ಕ್ರಿಸ್ತನ ತಂದೆಯಾದ ದೇವರನ್ನು ಕೊಂಡಾಡುವಿರಿ. 7 ಆದ್ದರಿಂದ ಕ್ರಿಸ್ತನು ನಿಮ್ಮನ್ನು ಸೇರಿಸಿಕೊಂಡಂತೆ ನೀವು ಸಹ ಒಬ್ಬರನ್ನೊಬ್ಬರು ಸೇರಿಸಿಕೊಂಡು ದೇವರನ್ನು ಮಹಿಮೆಪಡಿಸಿರಿ. 8 ಯಾಕೆಂದರೆ ಕ್ರಿಸ್ತನು ಪೂರ್ವಿಕರಿಗೆ ಉಂಟಾದ ದೇವರ ವಾಗ್ದಾನಗಳನ್ನು ದೃಢಪಡಿಸಿ ಆತನ ಸತ್ಯವನ್ನು ತೋರಿಸುವುದಕ್ಕಾಗಿ ಸುನ್ನತಿಯೆಂಬ ಸಂಸ್ಕಾರಕ್ಕೆ ಸೇವಕನಾಗಿದ್ದಾನೆಂದೂ, 9 ಅನ್ಯಜನರು ದೇವರನ್ನು ಆತನ ದಯೆಯ ನಿಮಿತ್ತ ಕೊಂಡಾಡುವುದಕ್ಕಾಗಿಯೂ ಇದನ್ನು ಹೇಳುತ್ತಿದ್ದೇನೆ. ಇದಕ್ಕೆ ಸರಿಯಾಗಿ ಧರ್ಮಶಾಸ್ತ್ರದಲ್ಲಿಯೂ ಈ ರೀತಿಯಾಗಿ ಬರೆದಿದೆ, “ಈ ಕಾರಣದಿಂದ ಅನ್ಯಜನಗಳ ಮಧ್ಯದಲ್ಲಿ ನಿನ್ನನ್ನು ಸ್ತುತಿಸುವೆನು; ನಿನ್ನ ನಾಮವನ್ನು ಸಂಕೀರ್ತಿಸುವೆನು” ಎಂದೂ, 10 ಇನ್ನೊಮ್ಮೆ, “ಅನ್ಯಜನಾಂಗಗಳಿರಾ ದೇವರ ಜನರೊಡನೆ ಉಲ್ಲಾಸಪಡಿರಿ” ಎಂದೂ, 11 ಮತ್ತೊಮ್ಮೆ, “ಸರ್ವಜನಾಂಗಗಳೇ, ಕರ್ತನನ್ನು ಕೀರ್ತಿಸಿರಿ, ಸಮಸ್ತಪ್ರಜೆಗಳು ಆತನನ್ನು ಸಂಕೀರ್ತಿಸಲಿ” ಎಂದೂ ಬರೆದದೆ. 12 ಮತ್ತೊಮ್ಮೆ, ಯೆಶಾಯನು ಹೇಳುವುದೇನಂದರೆ, “ಇಷಯನ ವಂಶಸ್ಥನೂ ಅಂದರೆ ಜನಾಂಗಗಳನ್ನು ಆಳತಕ್ಕವನು ಬರುತ್ತಾನೆ. ಜನಾಂಗಗಳು ಆತನನ್ನು ನಿರೀಕ್ಷಿಸುತ್ತಿರುವರು.” 13 ನಿರೀಕ್ಷೆಯನ್ನು ಕೊಡುವ ದೇವರು ಪವಿತ್ರಾತ್ಮನ ಶಕ್ತಿಯಿಂದ ಸಮೃದ್ಧವಾದ ನಿರೀಕ್ಷೆಯುಳ್ಳವರಾಗಿ ನಂಬುವುದರಿಂದ ಉಂಟಾಗುವ ಸಂತೋಷವನ್ನೂ ಮನಶ್ಯಾಂತಿಯನ್ನೂ ನಿಮಗೆ ಪರಿಪೂರ್ಣವಾಗಿ ದಯಪಾಲಿಸಲ್ಲಿ, ನೀವು ಪವಿತ್ರಾತ್ಮನಲ್ಲಿ ಬಲಗೊಂಡವರಾಗಿ ನಿರೀಕ್ಷೆಯಲ್ಲಿ ಅಭಿವೃದ್ಧಿಯನ್ನು ಹೊಂದುವಂತೆ ಅನುಗ್ರಹಿಸಲಿ. 14 ನನ್ನ ಸಹೋದರರೇ, ನೀವಂತೂ ಒಳ್ಳೆತನದಿಂದ ತುಂಬಿದವರಾಗಿದ್ದು, ಸಕಲ ಜ್ಞಾನದಿಂದ ತುಂಬಿದವರಾಗಿಯೂ ಒಬ್ಬರಿಗೊಬ್ಬರು ಬುದ್ಧಿಹೇಳುವುದಕ್ಕೆ ಶಕ್ತರಾಗಿಯೂ ಇದ್ದೀರೆಂದು ನಿಮ್ಮ ವಿಷಯದಲ್ಲಿ ದೃಢವಾಗಿ ನಂಬಿದ್ದೇನೆ. 15 15-16 ಆದರೂ ಪ್ರಿಯರೇ, ನಿಮ್ಮನ್ನು ನೆನಪಿಸುವುದಕ್ಕಾಗಿ ಕೆಲವೊಂದು ವಿಷಯಗಳನ್ನು ಹೆಚ್ಚಾದ ಧೈರ್ಯದಿಂದ ಬರೆದಿದ್ದೇನೆ. ಯಾಕೆಂದರೆ ನಾನು ಅನ್ಯಜನರಿಗೋಸ್ಕರ ಯೇಸು ಕ್ರಿಸ್ತನ ಸೇವಕನಾಗುವುದಕ್ಕೆ ನನಗೆ ದೇವರ ಆಶೀರ್ವಾದವಾಯಿತು. ನಾನು ದೇವರ ಸುವಾರ್ತಾ ಸೇವೆಯನ್ನು ಯಾಜಕ ಸೇವೆ ಎಂಬಂತೆ ನಡಿಸಿ ಪವಿತ್ರಾತ್ಮನ ಮೂಲಕವಾಗಿ ದೇವರಿಗೆ ಸಮರ್ಪಕವಾಗುವಂತೆ ಯತ್ನಿಸುವವನಾಗಿದ್ದೇನೆ. 17 ದೇವರ ಸೇವೆಯಲ್ಲಿ ಹೊಗಳಿಕೊಳ್ಳುವುದಕ್ಕೆ ಕ್ರಿಸ್ತ ಯೇಸುವಿನಲ್ಲಿ ನನಗೆ ಕಾರಣವುಂಟು 18 ಕ್ರಿಸ್ತನು ಅನ್ಯಜನಗಳನ್ನು ತನಗೆ ಅಧೀನಮಾಡಿಕೊಳ್ಳುವುದಕ್ಕಾಗಿ ನನ್ನ ಮಾತಿನಲ್ಲಿಯೂ ಕ್ರಿಯೆಯಲ್ಲಿಯೂ, ಸೂಚಕಕಾರ್ಯಗಳ, ಅದ್ಭುತಕಾರ್ಯಗಳ ಬಲದಿಂದಲೂ, ಪವಿತ್ರಾತ್ಮನ ಬಲದಿಂದಲೂ ಮಾಡಿಸಿದ ಕಾರ್ಯಗಳನ್ನೇ ಹೊರತು ಬೇರೆ ಯಾವ ಕಾರ್ಯಗಳನ್ನೂ ಹೇಳುವುದಕ್ಕೆ ನನಗೆ ಧೈರ್ಯ ಸಾಲದು. 19 ನಾನು ಯೆರೂಸಲೇಮ್ ಮೊದಲುಗೊಂಡು ಇಲ್ಲುರಿಕ ಸೀಮೆಯ ಸುತ್ತಮುತ್ತ ಪ್ರಯಾಣಿಸಿ ಕ್ರಿಸ್ತನ ಸುವಾರ್ತೆಯ ಸಾರೋಣವನ್ನು ಪೂರೈಸಿದ್ದೇನೆ. 20 ಮತ್ತೊಬ್ಬರು ಹಾಕಿದ ಅಸ್ತಿವಾರದ ಮೇಲೆ ಕಟ್ಟಬಾರದೆಂದು ಮನಸ್ಸಿನಲ್ಲಿ ತೀರ್ಮಾನಿಸಿ ಕ್ರಿಸ್ತನ ಹೆಸರನ್ನು ತಿಳಿಸಿದ ಕಡೆಯಲ್ಲಿ ನಾನು ಸುವಾರ್ತೆಯನ್ನು ಸಾರುವುದಿಲ್ಲವೆಂಬುದಾಗಿ ನಿಶ್ಚಯಮಾಡಿಕೊಂಡೆನು. 21 “ಯಾರಿಗೆ ಆತನ ಸಮಾಚಾರ ತಿಳಿದಿರುವುದಿಲ್ಲವೋ ಅವರೇ ಆತನನ್ನು ನೋಡುವರು. ಯಾರು ಆತನ ಬಗ್ಗೆ ಕೇಳಿರುವುದಿಲ್ಲವೋ ಅವರು ಆತನನ್ನು ಗ್ರಹಿಸಿಕೊಳ್ಳುವರು.” ಎಂಬುದಾಗಿ ಬರೆದಿರುವ ಪ್ರಕಾರ ನನ್ನ ಕೆಲಸವನ್ನು ನಡಿಸಿದ್ದೇನೆ. 22 ಈ ಕಾರಣದಿಂದ ನಿಮ್ಮ ಬಳಿಗೆ ಬರುವುದಕ್ಕೆ ನನಗೆ ಅನೇಕಾವರ್ತಿ ಅಡೆತಡೆಗಳಾದವು. 23 ಆದರೆ ಇನ್ನು ಮೇಲೆ ಈ ಪ್ರಾಂತ್ಯಗಳಲ್ಲಿ ನನಗೆ ಸ್ಥಳವಿಲ್ಲದ್ದರಿಂದಲೂ ನಿಮ್ಮ ಬಳಿಗೆ ಬರುವುದಕ್ಕೆ ಅನೇಕ ವರ್ಷಗಳಿಂದ ಆಸಕ್ತಿ ಇದ್ದುದರಿಂದಲೂ 24 ನಾನು ಸ್ಪೇನ್ ದೇಶಕ್ಕೆ ಹೋಗುವಾಗ ನನ್ನ ಮಾರ್ಗದಲ್ಲಿ ನಿಮ್ಮ ದರ್ಶನವನ್ನು ಮಾಡಬೇಕೆಂದು ಬಯಸಿದ್ದೇನೆ. ತರುವಾಯ ನಿಮ್ಮ ಜೊತೆಯಲ್ಲಿ ಸ್ವಲ್ಪ ಮಟ್ಟಿಗೆ ಸಂತೋಷವಾಗಿ ಸಮಯಕಳೆದ ನಂತರ ನೀವು ಆ ದೇಶಕ್ಕೆ ನನ್ನನ್ನು ಕಳುಹಿಸಿಕೊಡುವಿರೆಂದು ನಂಬುತ್ತೇನೆ. 25 ಆದರೆ ಈಗ ನಾನು ದೇವಜನರಿಗೆ ಸೇವೆಸಲ್ಲಿಸುವುದಕ್ಕಾಗಿ ಯೆರೂಸಲೇಮಿಗೆ ಹೋಗುತ್ತಿದ್ದೇನೆ. 26 ಯಾಕೆಂದರೆ ಯೆರೂಸಲೇಮಿನಲ್ಲಿರುವ ದೇವಜನರೊಳಗೆ ಬಡವರಿಗೋಸ್ಕರ ಸ್ವಲ್ಪ ಹಣದ ಸಹಾಯವನ್ನು ಮಾಡಬೇಕೆಂಬುದಾಗಿ ಮಕೆದೋನ್ಯ, ಅಖಾಯ ಸೀಮೆಗಳವರು ಇಷ್ಟಪಟ್ಟಿದ್ದಾರೆ. 27 ಇದನ್ನು ಮಾಡುವುದಕ್ಕೆ ಇವರು ಇಷ್ಟಪಟ್ಟಿದ್ದಲ್ಲದೆ ಇವರು ಅವರ ಹಂಗಿನವರಾಗಿದ್ದಾರೆ. ಹೇಗೆಂದರೆ ಅನ್ಯಜನರು ಅವರ ಆತ್ಮ ಸಂಬಂಧವಾದ ಸಂಪತ್ತಿಗೆ ಪಾಲುಗಾರರಾದ ಮೇಲೆ ಲೋಕಸಂಬಂಧವಾದ ಕಾರ್ಯಗಳಲ್ಲಿ ಅವರಿಗೆ ಸೇವೆ ಮಾಡುವ ಹಂಗಿನಲ್ಲಿದ್ದಾರಲ್ಲವೇ. 28 ನಾನು ಈ ಕೆಲಸವನ್ನು ಮುಗಿಸಿಕೊಂಡು ಈ ಪ್ರೀತಿಯ ಫಲವನ್ನು ಅಲ್ಲಿಯವರ ವಶಕ್ಕೆ ಸಂಪೂರ್ಣವಾಗಿ ಕೊಟ್ಟ ಮೇಲೆ ನಿಮ್ಮ ಮಾರ್ಗವಾಗಿ ಸ್ಪೇನ್ ದೇಶಕ್ಕೆ ಹೋಗುವೆನು. 29 ಇದಲ್ಲದೆ ನಿಮ್ಮ ಬಳಿಗೆ ಬರುವಾಗ ಕ್ರಿಸ್ತನಿಂದಾಗುವ ಆಶೀರ್ವಾದಗಳನ್ನು ಹೇರಳವಾಗಿ ತರುವೆನೆಂದು ಬಲ್ಲೆನು. 30 ಸಹೋದರರೇ, ನೀವು ನನಗೋಸ್ಕರ ದೇವರ ಮುಂದೆ ಮಾಡುವ ಪ್ರಾರ್ಥನೆಗಳಲ್ಲಿ ನನ್ನೊಂದಿಗೆ ಬಲವಾಗಿ ವಿಜ್ಞಾಪಿಸಿಕೊಳ್ಳಬೇಕೆಂದು ನಮ್ಮ ಕರ್ತನಾದ ಯೇಸು ಕ್ರಿಸ್ತನ ನಿಮಿತ್ತವಾಗಿಯೂ ಪವಿತ್ರಾತ್ಮನಿಂದಾಗುವ ಪ್ರೀತಿಯ ನಿಮಿತ್ತವಾಗಿಯೂ ನಿಮ್ಮನ್ನು ಬೇಡಿಕೊಳ್ಳುತ್ತೇನೆ. 31 ದೇವರು ನನ್ನನ್ನು ಯೂದಾಯದಲ್ಲಿರುವ ಅವಿಧೇಯರ ಕೈಯಿಂದ ತಪ್ಪಿಸಬೇಕೆಂತಲೂ ಯೆರೂಸಲೇಮಿಗೋಸ್ಕರ ನಾನು ಮಾಡುವಂಥ ಈ ಧರ್ಮಕಾರ್ಯವು ಅಲ್ಲಿರುವ ದೇವಜನರಿಗೆ ಹಿತಕರವಾಗಿ ತೋರಬೇಕೆಂತಲೂ ಪ್ರಾರ್ಥಿಸಿರಿ. 32 ಹೀಗೆ ನಾನು ದೇವರ ಚಿತ್ತಾನುಸಾರ ಆನಂದವುಳ್ಳವನಾಗಿ ನಿಮ್ಮಲ್ಲಿಗೆ ಬಂದು ನಿಮ್ಮ ಸಂಗಡ ವಿಶ್ರಾಂತಿಹೊಂದಲಾಗುವುದು. 33 ಶಾಂತಿದಾಯಕವಾದ ದೇವರು ನಿಮ್ಮೆಲ್ಲರೊಂದಿಗಿರಲಿ. ಆಮೆನ್.