Romans 9 (BOKCV2)
1 ನಾನು ಕ್ರಿಸ್ತ ಯೇಸುವಿನಲ್ಲಿ ಸತ್ಯವನ್ನು ಮಾತನಾಡುತ್ತೇನೆ. ನಾನು ಸುಳ್ಳು ಹೇಳುತ್ತಾ ಇಲ್ಲ. ನನ್ನ ಮನಸ್ಸಾಕ್ಷಿಯು ಇದನ್ನು ಪವಿತ್ರಾತ್ಮ ದೇವರ ಮೂಲಕ ಖಚಿತ ಪಡಿಸುತ್ತದೆ. 2 ನನ್ನ ಹೃದಯದಲ್ಲಿ ಮಹಾದುಖಃವೂ ಎಡೆಬಿಡದ ವೇದನೆಯೂ ತೀರದವೇದನೆಯೂ ಇದೆ. 3 ನನ್ನ ಸ್ವಂತ ಜನರಾದ ನನ್ನ ಯೆಹೂದ್ಯ ಸಹೋದರರಿಗಾಗಿ, ಸಾಧ್ಯವಾದರೆ ನಾನೇ ಕ್ರಿಸ್ತ ಯೇಸುವಿನಿಂದ ದೂರಹೋಗಿ ಶಾಪಗ್ರಸ್ತನಾಗಲು ಸಿದ್ಧನಾಗಿದ್ದೇನೆ. 4 ಇಸ್ರಾಯೇಲರಾದ ಅವರಿಗೆ ಸ್ವೀಕಾರವೂ ದೇವರ ಮಹಿಮೆಯೂ ಒಡಂಬಡಿಕೆಗಳೂ ನಿಯಮ ಕೊಡೋಣವೂ ದೇವಾಲಯದ ಸೇವೆಯೂ ಹಾಗೂ ವಾಗ್ದಾನಗಳೂ ಒಪ್ಪಿಸಲಾಗಿವೆ. 5 ನಮ್ಮ ಪಿತೃಗಳು ಅವರಿಗೆ ಸೇರಿದವರು. ಕ್ರಿಸ್ತ ಯೇಸುವು ಮನುಷ್ಯರಾಗಿ ಹುಟ್ಟಿದ್ದು ಅವರ ವಂಶದಲ್ಲಿಯೇ; ಈ ಕ್ರಿಸ್ತ ಯೇಸುವೇ ಎಲ್ಲರ ಮೇಲಿರುವ ದೇವರೂ ಎಂದೆಂದಿಗೂ ಸ್ತುತಿಹೊಂದತಕ್ಕವರೂ ಆಗಿದ್ದಾರೆ! ಆಮೆನ್. 6 ಇದು ದೇವರ ವಾಕ್ಯವು ನೆರವೇರಲಿಲ್ಲ ಎಂಬಂತೆ ಅಲ್ಲ. ಏಕೆಂದರೆ ಇಸ್ರಾಯೇಲ್ ವಂಶದಲ್ಲಿ ಬಂದವರೆಲ್ಲರೂ ಇಸ್ರಾಯೇಲರಲ್ಲ. 7 ಅಥವಾ ಅಬ್ರಹಾಮನ ಸಂತತಿಯವರೆಲ್ಲ ಅವನ ಮಕ್ಕಳಲ್ಲ. ಆದರೆ, “ಇಸಾಕನಿಂದ ಹುಟ್ಟುವವರೇ ನಿನ್ನ ಸಂತತಿ ಎನಿಸಿಕೊಳ್ಳುವರು,” ಎಂದು ಹೇಳಲಾಗಿದೆ. 8 ಇದರ ಅರ್ಥ, ಶರೀರಸಂಬಂಧದ ಮಕ್ಕಳು ದೇವರ ಮಕ್ಕಳಾಗಿರದೆ ವಾಗ್ದಾನದ ಮಕ್ಕಳೇ ಅಬ್ರಹಾಮನ ಮಕ್ಕಳೆಂದು ಎನಿಸಿಕೊಳ್ಳುವರು ಎಂಬುದು. 9 ಏಕೆಂದರೆ, “ನೇಮಕವಾದ ಕಾಲದಲ್ಲಿ ನಾನು ತಿರುಗಿ ಬಂದಾಗ ಸಾರಳಿಗೆ ಒಬ್ಬ ಮಗನಿರುವನು,” ಅದು ವಾಗ್ದಾನದ ಮಾತಾಗಿತ್ತು. 10 ಇದು ಮಾತ್ರವಲ್ಲದೆ, ರೆಬೆಕ್ಕಳು ಸಹ ನಮ್ಮ ಪಿತೃವಾದ ಇಸಾಕನ ಮೂಲಕ ಅವಳಿಜವಳಿ ಮಕ್ಕಳನ್ನು ಪಡೆದಳು. 11 ಹೀಗೆ, ಆ ಮಕ್ಕಳು ಹುಟ್ಟುವುದಕ್ಕೆ ಮುಂಚೆ, ಒಳ್ಳೆಯದು ಅಥವಾ ಕೆಟ್ಟದ್ದನ್ನು ಮಾಡುವುದಕ್ಕೆ ಮುಂಚೆಯೇ, ದೇವರ ಆಯ್ಕೆಯ ಉದ್ದೇಶವು ಕೃತ್ಯಗಳಿಗೆ ಅನುಸಾರವಲ್ಲವೆಂಬುದು ಸ್ಥಿರವಾಯಿತು. 12 ಆದರೆ ಅದು ಕರೆಯುವಾತನಿಂದಲೇ, “ಹಿರಿಯನು ಕಿರಿಯವನಿಗೆ ಸೇವೆಮಾಡುವನು,” ಎಂದು ರೆಬೆಕ್ಕಳಿಗೆ ಹೇಳಲಾಗಿತ್ತು. 13 ಇದಕ್ಕನುಸಾರವಾಗಿ, “ಯಾಕೋಬನನ್ನು ನಾನು ಪ್ರೀತಿಸಿದೆನು, ಆದರೆ ಏಸಾವನನ್ನು ಹಗೆ ಮಾಡಿದೆನು,” ಎಂದು ಬರೆದಿರುತ್ತದೆ. 14 ಹಾಗಾದರೆ ನಾವು ಏನು ಹೇಳೋಣ? ದೇವರು ಅನ್ಯಾಯಗಾರನೋ? ಎಂದಿಗೂ ಇಲ್ಲ. 15 ದೇವರು ಮೋಶೆಗೆ ಹೇಳಿದ್ದೇನೆಂದರೆ,“ಯಾವನ ಮೇಲೆ ನನ್ನ ಕರುಣೆ ಉಂಟೋ, ಅವನನ್ನು ಕರುಣಿಸುವೆನು.ಯಾವನ ಮೇಲೆ ನನ್ನ ಕನಿಕರವಿದೆಯೋ ಅವನನ್ನು ಕನಿಕರಿಸುವೆನು.” 16 ಆದ್ದರಿಂದ ದೇವರ ಆಯ್ಕೆಯು ಮನುಷ್ಯನ ಬಯಕೆ ಅಥವಾ ಪ್ರಯತ್ನದಿಂದಾಗಿರದೆ, ದೇವರ ಕರುಣೆಯಿಂದಲೇ ಆಗಿದೆ. 17 ಏಕೆಂದರೆ, “ನಾನು ನಿನ್ನಲ್ಲಿ ನನ್ನ ಶಕ್ತಿಯನ್ನು ತೋರಿಸಿ ನನ್ನ ಹೆಸರನ್ನು ಭೂಮಿಯ ಮೇಲೆಲ್ಲಾ ಪ್ರಸಿದ್ಧಪಡಿಸಬೇಕೆಂಬ ಉದ್ದೇಶದಿಂದಲೇ ನಿನ್ನನ್ನು ಉನ್ನತಸ್ಥಾನಕ್ಕೆ ಏರಿಸಿದೆನು,” ಎಂದು ಪವಿತ್ರ ವೇದದಲ್ಲಿ ದೇವರು ಫರೋಹನಿಗೆ ಹೇಳುತ್ತಾರೆ. 18 ಆದ್ದರಿಂದ ದೇವರು ಯಾರನ್ನು ಕರುಣಿಸಬೇಕೆಂದು ಬಯಸುತ್ತಾರೋ, ಅವರನ್ನು ಕರುಣಿಸುತ್ತಾರೆ. ಯಾರನ್ನು ಕಠಿಣಪಡಿಸಬೇಕೆಂದು ಬಯಸುತ್ತಾರೋ, ಅವರನ್ನು ಕಠೋರನ್ನಾಗಿ ಮಾಡುತ್ತಾರೆ. 19 ಹಾಗಾದರೆ ನೀನು, “ದೇವರು ಇನ್ನೂ ತಪ್ಪು ಕಂಡುಹಿಡಿಯುವುದು ಏಕೆ? ದೇವರ ಸಂಕಲ್ಪವನ್ನು ಎದುರಿಸುವವರು ಯಾರು?” ಎಂದು ನೀನು ನನ್ನನ್ನು ಕೇಳುವೆ. 20 ಎಲೈ, ಮನುಷ್ಯನೇ, ದೇವರಿಗೆ ಎದುರಾಗಿ ಮಾತನಾಡಲು ನೀನು ಯಾರು? “ರೂಪಿಸಿರುವುದು ರೂಪಿಸಿದವನಿಗೆ, ‘ಏಕೆ ನನ್ನನ್ನು ಹೀಗೆ ರೂಪಿಸಿದೆ?’ ” ಎಂದು ಪ್ರಶ್ನಿಸಬಹುದೋ? 21 ಕುಂಬಾರನಿಗೆ ಒಂದೇ ಮಣ್ಣಿನ ರಾಶಿಯಿಂದ ಒಂದನ್ನು ಉತ್ತಮವಾದ ಪಾತ್ರೆಯನ್ನಾಗಿಯೂ ಮತ್ತೊಂದನ್ನು ಸಾಮಾನ್ಯವಾದ ಪಾತ್ರೆಯನ್ನಾಗಿಯೂ ಮಾಡುವ ಅಧಿಕಾರ ಇಲ್ಲವೋ? 22 ನಾಶಕ್ಕೂ, ಕೋಪಾಗ್ನಿಗೂ ಪಾತ್ರೆಯಾಗಿರುವುದರ ಮೇಲೆ ದೇವರು ತಮ್ಮ ಕೋಪವನ್ನು ತೋರಿಸಿ ತಮ್ಮ ಸಾಮರ್ಥ್ಯವನ್ನು ತಿಳಿಯಪಡಿಸಬೇಕೆಂದಿದ್ದರೂ ಬಹು ಸಹನೆಯಿಂದ ತಾಳಿಕೊಂಡಿರಲು ಬಯಸಿದರೆ, ಯಾರು ಏನು ಮಾಡಬಹುದು? 23 ದೇವರು ಯೆಹೂದ್ಯರೊಳಗಿಂದ ಮಾತ್ರವೇ ಕರೆಯದೆ, ಯೆಹೂದ್ಯರಲ್ಲದವರಿಂದಲೂ ಕರೆದು, ಮಹಿಮೆಗೆಂದು ಮೊದಲೇ ಸಿದ್ಧಮಾಡಿ, ತಮ್ಮ ಕರುಣೆಗೆ ಪಾತ್ರರಾದ ಜನರಿಗೆ ತಮ್ಮ ಮಹಿಮೆಯ ಐಶ್ವರ್ಯವನ್ನು ಪ್ರಕಟಿಸಲು ಇದನ್ನು ಮಾಡಿದರು. 24 ಇದಕ್ಕಾಗಿಯೇ ದೇವರು ಯೆಹೂದ್ಯರನ್ನು ಮಾತ್ರವೇ ಕರೆಯದೆ ಯೆಹೂದ್ಯರಲ್ಲದವರನ್ನು ಸಹ ಕರೆದಿದ್ದಾರಲ್ಲಾ? 25 ಹೋಶೇಯನ ಪ್ರವಾದನೆಯಲ್ಲಿ ದೇವರು,“ನನ್ನ ಜನರಲ್ಲದವರನ್ನು ‘ನನ್ನ ಜನರು,’ ಎಂದು ಕರೆಯುವರು.ನಾನು ಪ್ರೀತಿಸದವರನ್ನು ನನ್ನ ‘ಪ್ರಿಯರು’ ಎಂದೂ ಹೇಳುವರು.” 26 ಮತ್ತು,“ಯಾವ ಸ್ಥಳದಲ್ಲಿ‘ನೀವು ನನ್ನ ಜನರಲ್ಲ,’ ಎಂದು ಅವರಿಗೆ ಹೇಳಲಾಗಿತ್ತೋ,ಆ ಸ್ಥಳದಲ್ಲಿಯೇ, ‘ಅವರು ಜೀವಸ್ವರೂಪಿಯಾದ ದೇವರ ಮಕ್ಕಳು,’ ಎಂದು ಕರೆಯಲಾಗುವರು,”ಎಂದು ದೇವರು ಹೇಳುತ್ತಾರೆ. 27 ಇದಲ್ಲದೆ ಯೆಶಾಯನು ಇಸ್ರಾಯೇಲರನ್ನು ಕುರಿತು ಕೂಗಿ ಹೇಳುವುದೇನೆಂದರೆ,“ಇಸ್ರಾಯೇಲರ ಸಂಖ್ಯೆಯು ಸಮುದ್ರದ ಉಸುಬಿನಂತಿದ್ದರೂಅವರಲ್ಲಿ ಕೆಲವರು ಮಾತ್ರ ರಕ್ಷಣೆಹೊಂದುವರು. 28 ಏಕೆಂದರೆ ಕರ್ತನು ತಮ್ಮ ವಾಕ್ಯವನ್ನುಭೂಮಿಯ ಮೇಲೆ ಅಂತಿಮವಾಗಿಯೂ ತ್ವರಿತವಾಗಿಯೂ ನೆರವೇರಿಸುವರು.” 29 ಯೆಶಾಯನು ಈ ಹಿಂದೆ,“ಸೇನಾಧೀಶ್ವರರಾದ ದೇವರುನಮಗೆ ಸಂತತಿಯನ್ನು ಉಳಿಸದೆ ಹೋಗಿದ್ದರೆ,ನಾವು ಸೊದೋಮಿನಂತೆ ಆಗುತ್ತಿದ್ದೆವು,ಗೊಮೋರದ ಹಾಗೆ ಇರುತ್ತಿದ್ದೆವು.”ಎಂದು ಹೇಳಿದ್ದಾನೆ. 30 ಹಾಗಾದರೆ ನಾವು ಏನು ಹೇಳೋಣ? ನೀತಿಯನ್ನು ಅನುಸರಿಸದ ಯೆಹೂದ್ಯರಲ್ಲದವರು ನಂಬಿಕೆಯ ಮೂಲಕ ದೊರಕುವ ನೀತಿಯನ್ನು ಪಡೆದರು. 31 ಆದರೆ ನೀತಿಯ ನಿಯಮವನ್ನು ಅನುಸರಿಸಿದ ಇಸ್ರಾಯೇಲರಾದರೋ ಆ ನೀತಿಯ ಮಾರ್ಗವನ್ನು ಪಡೆಯಲಿಲ್ಲ. 32 ಏಕೆ? ಏಕೆಂದರೆ ಅವರು ನಂಬಿಕೆಯನ್ನು ಅನುಸರಿಸದೆ ಕೃತ್ಯಗಳನ್ನು ಅನುಸರಿಸಿದ್ದರಿಂದಲೇ. ಅವರು ಎಡವುಕಲ್ಲನ್ನು ಎಡವಿದರು. 33 ಪವಿತ್ರ ವೇದದಲ್ಲಿ ಹೀಗೆ ಬರೆಯಲಾಗಿದೆ:“ಇಗೋ, ನಾನು ಚೀಯೋನಿನಲ್ಲಿ ಜನರು ಎಡವಿ ಬೀಳುವಂತೆ ಮಾಡುವ ಕಲ್ಲನ್ನೂಮುಗ್ಗರಿಸುವ ಬಂಡೆಯನ್ನೂ ಇಡುತ್ತೇನೆ.ಆತನ ಮೇಲೆ ನಂಬಿಕೆಯಿಡುವವನು ಆಶಾಭಂಗಪಡುವದೇ ಇಲ್ಲ.”