2 Timothy 1 (BOKCV2)
1 ಕ್ರಿಸ್ತ ಯೇಸುವಿನಲ್ಲಿರುವ ಜೀವ ವಾಗ್ದಾನದ ಪ್ರಕಾರ ದೇವರ ಚಿತ್ತದಿಂದ ಕ್ರಿಸ್ತ ಯೇಸುವಿನ ಅಪೊಸ್ತಲನಾದ ಪೌಲನೆಂಬ ನಾನು, 2 ನನ್ನ ಪ್ರಿಯ ಪುತ್ರನಾದ ತಿಮೊಥೆಯನಿಗೆ ಬರೆಯುವುದು: ತಂದೆ ದೇವರಿಂದಲೂ ನಮಗೆ ಕರ್ತ ಆಗಿರುವ ಕ್ರಿಸ್ತ ಯೇಸುವಿನಿಂದಲೂ ಕೃಪೆಯೂ ಕರುಣೆಯೂ ಶಾಂತಿಯೂ ಆಗಲಿ. 3 ನಾನು ಹಗಲಿರುಳು ನನ್ನ ಪ್ರಾರ್ಥನೆಗಳಲ್ಲಿ ನಿನ್ನನ್ನು ತಪ್ಪದೆ ನೆನೆಸಿಕೊಳ್ಳುತ್ತೇನೆ. ಇದಲ್ಲದೆ ಶುದ್ಧ ಮನಸ್ಸಾಕ್ಷಿಯುಳ್ಳವನಾಗಿ ನಾನು ನನ್ನ ಪೂರ್ವಿಕರಂತೆ ದೇವರ ಸೇವೆಮಾಡುತ್ತಾ ದೇವರಿಗೆ ಕೃತಜ್ಞತೆಯನ್ನು ಸಲ್ಲಿಸುತ್ತೇನೆ. 4 ನಾನು ನಿನ್ನ ಕಣ್ಣೀರನ್ನು ನೆನಪಿಗೆ ತಂದು, ನಿನ್ನನ್ನು ನೋಡಿ ಆನಂದಭರಿತನಾಗಬೇಕೆಂದು ಬಹಳವಾಗಿ ಹಂಬಲಿಸುತ್ತೇನೆ. 5 ನಿನ್ನಲ್ಲಿರುವ ನಿಷ್ಕಪಟವಾದ ನಂಬಿಕೆಯು ನನ್ನ ನೆನಪಿನಲ್ಲಿದೆ. ನಿನ್ನ ಅಜ್ಜಿಯಾದ ಲೋವಿಯಲ್ಲಿಯೂ ನಿನ್ನ ತಾಯಿಯಾದ ಯೂನಿಕೆಯಲ್ಲಿಯೂ ಮೊದಲು ಇದ್ದ ನಂಬಿಕೆಯು ಈಗ ನಿನ್ನಲ್ಲಿಯೂ ಇದೆಯೆಂದು ನಾನು ದೃಢವಾಗಿ ನಂಬಿದ್ದೇನೆ. 6 ಆದಕಾರಣ ನಾನು ನಿನ್ನ ತಲೆಯ ಮೇಲೆ ಹಸ್ತಗಳನ್ನು ಇಟ್ಟಿದ್ದರ ಮೂಲಕ ನಿನಗೆ ದೊರಕಿದ ದೇವರ ವರವು ಪ್ರಜ್ವಲಿಸುವಂತೆ ಮಾಡಬೇಕೆಂದು ನಿನಗೆ ಜ್ಞಾಪಕ ಮಾಡುತ್ತೇನೆ. 7 ದೇವರು ನಮಗೆ ಕೊಟ್ಟಿರುವ ಆತ್ಮವು ಶಕ್ತಿ, ಪ್ರೀತಿ ಹಾಗೂ ಸ್ವಶಿಸ್ತು ಆತ್ಮವೇ ಹೊರತು ಭಯದ ಆತ್ಮವಲ್ಲ. 8 ಹೀಗಿರುವುದರಿಂದ ನಮ್ಮ ಕರ್ತ ಯೇಸುವಿನ ಸಾಕ್ಷಿಯ ವಿಷಯವಾಗಿಯೂ ಅವರ ಸೆರೆಯವನಾದ ನನ್ನ ವಿಷಯವಾಗಿಯೂ ನೀನು ನಾಚಿಕೆಪಡಬೇಡ. ಅದರ ಬದಲಾಗಿ, ದೇವರ ಶಕ್ತಿಗೆ ಅನುಸಾರವಾಗಿ, ಸುವಾರ್ತೆಗೋಸ್ಕರ ನನ್ನೊಂದಿಗೆ ಶ್ರಮೆಯನ್ನು ಅನುಭವಿಸು. 9 ದೇವರು ನಮ್ಮ ಕ್ರಿಯೆಗಳಿಗನುಸಾರವಾಗಿ ಅಲ್ಲ, ತಮ್ಮ ಸ್ವಂತ ಸಂಕಲ್ಪ ಮತ್ತು ಕೃಪೆಯ ಪ್ರಕಾರ ನಮ್ಮನ್ನು ರಕ್ಷಿಸಿ ಪರಿಶುದ್ಧವಾದ ಜೀವಿತಕ್ಕೆ ನಮ್ಮನ್ನು ಕರೆದರು. ಈ ಕೃಪೆಯು ಕಾಲದ ಆರಂಭಕ್ಕೆ ಮುಂಚೆಯೇ ಕ್ರಿಸ್ತ ಯೇಸುವಿನಲ್ಲಿ ನಮಗೆ ಕೊಡಲಾಯಿತು. 10 ಆದರೆ ಈಗ ನಮಗೆ ರಕ್ಷಕ ಆಗಿರುವ ಕ್ರಿಸ್ತ ಯೇಸುವಿನ ಪ್ರತ್ಯಕ್ಷತೆಯ ಮೂಲಕ ಕೃಪೆ ಪ್ರಕಟವಾಯಿತು. ಕ್ರಿಸ್ತ ಯೇಸು ಮರಣವನ್ನು ನಾಶಮಾಡಿ, ಸುವಾರ್ತೆಯ ಮೂಲಕ ಜೀವವನ್ನೂ ನಿರ್ಲಯತ್ವವನ್ನೂ ಪ್ರಕಾಶಗೊಳಿಸಿದರು. 11 ಈ ಸುವಾರ್ತೆಯನ್ನು ನಾನು ಸಾರುವವನಾಗಿಯೂ ಅಪೊಸ್ತಲನಾಗಿಯೂ ಯೆಹೂದ್ಯರಲ್ಲದವರಿಗೆ ಉಪದೇಶಕನಾಗಿಯೂ ದೇವರಿಂದ ನೇಮಕವಾದೆನು. 12 ಇದಕ್ಕಾಗಿಯೇ ನಾನು ಈ ಶ್ರಮೆಗಳನ್ನು ಅನುಭವಿಸುತ್ತಿದ್ದೇನೆ. ಆದರೆ ನಾನು ನಾಚಿಕೆಪಡುವುದಿಲ್ಲ. ಏಕೆಂದರೆ ನಾನು ನಂಬಿರುವ ಕ್ರಿಸ್ತ ಯೇಸುವನ್ನು ಬಲ್ಲೆನು. ನಾನು ಕ್ರಿಸ್ತ ಯೇಸುವಿಗೆ ಒಪ್ಪಿಸಿದ್ದನ್ನು ಅವರು ಆ ದಿನಕ್ಕಾಗಿ ಕಾಪಾಡುವುದಕ್ಕೆ ಶಕ್ತರಾಗಿದ್ದಾರೆಂಬ ದೃಢವಿಶ್ವಾಸ ನನಗಿದೆ. 13 ನೀನು ನನ್ನಿಂದ ಕೇಳಿದ ಸ್ವಸ್ಥವಾಕ್ಯಗಳನ್ನು ಕ್ರಿಸ್ತ ಯೇಸುವಿನಲ್ಲಿರುವ ವಿಶ್ವಾಸ ಹಾಗೂ ಪ್ರೀತಿಯೊಂದಿಗೆ ಒಂದು ಮಾದರಿಯಾಗಿ ಹಿಡಿದುಕೋ. 14 ನಿನಗೆ ಒಪ್ಪಿಸಲಾಗಿರುವ ಆ ಒಳ್ಳೆಯದನ್ನು ನಮ್ಮಲ್ಲಿ ವಾಸವಾಗಿರುವ ಪವಿತ್ರಾತ್ಮ ದೇವರ ಮೂಲಕ ನೀನು ಕಾಪಾಡು. 15 ಏಷ್ಯ ಸೀಮೆಯಲ್ಲಿ ಫುಗೇಲನೂ ಹರ್ಮೊಗೇನನೂ ಒಳಗೊಂಡು ಎಲ್ಲರೂ ನನ್ನನ್ನು ಬಿಟ್ಟು ಹೋದರೆಂಬುದನ್ನು ನೀನು ಬಲ್ಲೆ. 16 ಒನೇಸಿಫೊರನ ಮನೆಯವರಿಗೆ ಕರ್ತ ಯೇಸು ಕರುಣೆಯನ್ನು ದಯಪಾಲಿಸಲಿ. ಏಕೆಂದರೆ ಅವನು ಅನೇಕಾವರ್ತಿ ನನ್ನನ್ನು ಉತ್ತೇಜನ ಪಡಿಸಿದನು. ನನ್ನ ಬೇಡಿಗಳಿಗೆ ನಾಚಿಕೆ ಪಡಲಿಲ್ಲ. 17 ಆದರೆ ಅವನು ರೋಮಿನಲ್ಲಿದ್ದಾಗ ಪ್ರಯಾಸದಿಂದ ನನ್ನನ್ನು ಹುಡುಕಿ ಕಂಡುಕೊಂಡನು. 18 ಅವನು ಆ ದಿನದಲ್ಲಿ ಕರ್ತ ಯೇಸುವಿನಿಂದ ಕರುಣೆಯನ್ನು ಕಂಡುಕೊಳ್ಳುವಂತೆ ಕರ್ತ ಯೇಸುವೇ ಅವನಿಗೆ ಅನುಗ್ರಹ ಮಾಡಲಿ. ಎಫೆಸದಲ್ಲಿ ಅವನು ನನಗೆ ಎಷ್ಟು ಸಹಾಯಮಾಡಿದನೆಂಬುದು ನಿನಗೆ ಚೆನ್ನಾಗಿ ಗೊತ್ತಿದೆ.