Jeremiah 50 (BOKCV2)
1 ಬಾಬಿಲೋನಿಯರ ದೇಶವಾದ ಬಾಬಿಲೋನಿಯದ ಕುರಿತು ಪ್ರವಾದಿ ಯೆರೆಮೀಯನಿಂದ ಯೆಹೋವ ದೇವರು ನುಡಿಸಿದ ವಾಕ್ಯ ಇದು: 2 “ಜನಾಂಗಗಳಲ್ಲಿ ಪ್ರಚುರಪಡಿಸಿರಿ,ಧ್ವಜವನ್ನೆತ್ತಿ ಪ್ರಕಟಿಸಿರಿ;ಮರೆಮಾಡದೇ ಹೀಗೆ ಸಾರಿರಿ,‘ಬಾಬಿಲೋನ್ ಶತ್ರುವಶವಾಯಿತು;ಬೇಲ್ ದೇವತೆಗೆ ನಾಚಿಕೆಯಾಯಿತು;ಮೆರೋದಾಕ್ ತುಂಡುತುಂಡಾಗಿ ಮುರಿದು ಹೋದನು.ಅವಳ ವಿಗ್ರಹಗಳಿಗೆ ನಾಚಿಕೆಯಾಯಿತು.ಮತ್ತು ಅವಳ ವಿಗ್ರಹಗಳು ಭಯದಿಂದ ತುಂಬಿವೆ.’ 3 ಏಕೆಂದರೆ ಉತ್ತರದಿಂದ ಅವಳ ವಿರೋಧವಾಗಿ ಜನಾಂಗವು ಬರುತ್ತದೆ;ಅದು ಅವಳ ದೇಶವನ್ನು ಹಾಳುಮಾಡಿಬಿಡುವುದು;ಅವಳಲ್ಲಿ ಯಾರೂ ವಾಸಿಸುವುದಿಲ್ಲ;ಮನುಷ್ಯರೂ, ಮೃಗಗಳೂ ಒಟ್ಟಾಗಿ ತೊಲಗಿಬಿಡುತ್ತಾರೆ, ಓಡಿಹೋಗುತ್ತಾರೆ. 4 “ಆ ದಿವಸಗಳಲ್ಲಿಯೂ ಆ ಕಾಲದಲ್ಲಿಯೂಇಸ್ರಾಯೇಲರು ಬರುವರು; ಅವರೂ, ಯೆಹೂದ್ಯರೂ ಒಟ್ಟಾಗಿ ಕೂಡಿಕೊಳ್ಳುವರು,”ಎಂದು ಯೆಹೋವ ದೇವರು ಹೇಳುತ್ತಾರೆ.“ಅವರು ಅಳುತ್ತಾ ಹೋಗಿ,ತಮ್ಮ ದೇವರಾದ ಯೆಹೋವ ದೇವರನ್ನು ಹುಡುಕುವರು. 5 ಚೀಯೋನಿನ ಕಡೆಗೆ ಅಭಿಮುಖರಾಗಿಅದರ ಮಾರ್ಗವನ್ನು ವಿಚಾರಿಸಿ ಬನ್ನಿ;ಮರೆತು ಹೋಗದ ನಿತ್ಯವಾದ ಒಡಂಬಡಿಕೆಯಿಂದಯೆಹೋವ ದೇವರನ್ನು ಸೇರಿಕೊಳ್ಳೋಣ, ಅನ್ನುವರು. 6 “ನನ್ನ ಜನರು ಕಳೆದುಹೋದ ಕುರಿಗಳಾಗಿದ್ದಾರೆ;ಅವರ ಕುರುಬರು ಅವರನ್ನು ತಪ್ಪಿಹೋಗುವಂತೆ ಮಾಡಿದರು;ಅವರನ್ನು ಬೆಟ್ಟಗಳ ಮೇಲೆ ತಿರುಗಿಸಿ ಅಡ್ಡಾಡಿಸಿದರು;ಅವರು ಬೆಟ್ಟದಿಂದ ಗುಡ್ಡಕ್ಕೆ ಹೋದರು;ಮಲಗುವ ಸ್ಥಳವನ್ನು ಮರೆತುಬಿಟ್ಟರು. 7 ಅವರನ್ನು ಕಂಡವರೆಲ್ಲರು ಅವರನ್ನು ನುಂಗಿಬಿಟ್ಟಿದ್ದಾರೆ;ಅವರ ಎದುರಾಳಿಗಳು, ‘ನಾವು ಅವರನ್ನು ನುಂಗಿದ್ದು ದೋಷವಲ್ಲ;ಏಕೆಂದರೆ ನೀತಿಯ ನಿವಾಸವಾದ ಯೆಹೋವ ದೇವರಿಗೆ,ಹೌದು, ಅವರ ಪೂರ್ವಜರ ನಿರೀಕ್ಷೆಯಾದ ಯೆಹೋವ ದೇವರಿಗೆವಿರೋಧವಾಗಿ ಪಾಪಮಾಡಿದ್ದಾರೆ,’ ಎಂದುಕೊಂಡರು. 8 “ಬಾಬಿಲೋನಿನೊಳಗಿಂದ ಓಡಿಹೋಗಿರಿ;ಬಾಬಿಲೋನಿನ ಸೀಮೆಯಿಂದ ಹೊರಡಿರಿ;ಮಂದೆಯ ಮುಂದೆ ಹೋತಗಳ ಹಾಗೆ ಇರಿ. 9 ಏಕೆಂದರೆ ಇಗೋ, ನಾನು ಉತ್ತರ ದೇಶದಿಂದ ದೊಡ್ಡ ಜನಾಂಗಗಳ ಸಭೆ ಸೇರಿಸಿ,ಬಾಬಿಲೋನಿಗೆ ವಿರೋಧವಾಗಿ ಏಳುವಂತೆ ಮಾಡುತ್ತೇನೆ.ಅವರು ಅದಕ್ಕೆ ವಿರೋಧವಾಗಿ ಯುದ್ಧ ಸಿದ್ಧಮಾಡುವರು.ಅಲ್ಲಿಂದ ಅದು ಹಿಡಿಯಲಾಗುವುದು.ಅವರ ಬಾಣಗಳು ಬಲಿಷ್ಠನಾದ ಪ್ರವೀಣ ಶೂರನಂತಿರುವುವು.ಯಾವುದೂ ವ್ಯರ್ಥವಾಗಿ ತಿರುಗದು. 10 ಬಾಬಿಲೋನಿನ ದೇಶವು ಸುಲಿಗೆಯಾಗುವುದು;ಅದನ್ನು ಸುಲಿದುಕೊಳ್ಳುವವರೆಲ್ಲರಿಗೆ ತೃಪ್ತಿಯಾಗುವುದು,ಎಂದು ಯೆಹೋವ ದೇವರು ಹೇಳುತ್ತಾರೆ. 11 “ಏಕೆಂದರೆ ನನ್ನ ಸೊತ್ತನ್ನು ನಾಶಮಾಡಿದವರೇ,ನೀವು ಸಂತೋಷಿಸಿದ್ದರಿಂದಲೂ,ನೀವು ಉಲ್ಲಾಸಿಸಿದ್ದರಿಂದಲೂ, ಕೊಬ್ಬಿದ ಕಡಸಿನ ಹಾಗೆ ಗರ್ವ ಪಟ್ಟದ್ದರಿಂದಲೂ,ಗಂಡು ಕುದುರೆಗಳ ಹಾಗೆ ಹೂಂಕರಿಸಿದ್ದರಿಂದಲೂ, 12 ನಿಮ್ಮ ತಾಯಿ ಬಹಳವಾಗಿ ನಾಚಿಕೆಪಡುವಳು;ನಿಮ್ಮನ್ನು ಹೆತ್ತವಳು ಲಜ್ಜೆ ಹೊಂದುವಳು;ಇಗೋ, ಜನಾಂಗಗಳಲ್ಲಿ ಅಂತ್ಯವಾದದ್ದು ಕಾಡೂ,ಒಣ ಭೂಮಿಯೂ, ಮರುಭೂಮಿಯೂ ಆಗುವುದು. 13 ಯೆಹೋವ ದೇವರ ರೌದ್ರದ ನಿಮಿತ್ತ ಅದರಲ್ಲಿ ಯಾರೂ ವಾಸಮಾಡುವುದಿಲ್ಲ;ಸಂಪೂರ್ಣ ಹಾಳಾಗುವುದು;ಬಾಬಿಲೋನನ್ನು ಹಾದುಹೋಗುವವರೆಲ್ಲರುಅದರ ಎಲ್ಲಾ ಗಾಯಗಳ ವಿಷಯ ವಿಸ್ಮಯಪಟ್ಟು ಸಿಳ್ಳುಹಾಕುವರು. 14 “ಬಿಲ್ಲನ್ನು ಬಗ್ಗಿಸುವವರೇ,ಬಾಬಿಲೋನಿಗೆ ವಿರೋಧವಾಗಿ ಸುತ್ತಲೂ ಯುದ್ಧ ಸಿದ್ಧಮಾಡಿರಿ;ಅದಕ್ಕೆ ಎಸೆಯಿರಿ; ಬಾಣಗಳನ್ನು ಕಡಿಮೆ ಮಾಡಬೇಡಿರಿ;ಏಕೆಂದರೆ ಯೆಹೋವ ದೇವರಿಗೆ ವಿರೋಧವಾಗಿ ಪಾಪಮಾಡಿತಲ್ಲಾ. 15 ಸುತ್ತಲೂ ಅದಕ್ಕೆ ವಿರೋಧವಾಗಿ ಆರ್ಭಟಿಸಿರಿ;ಅದರ ಬುರುಜುಗಳು ಬಿದ್ದು ಹೋದವು;ಅದರ ಪೌಳಿಗೋಡೆಯನ್ನು ಕೆಡವಲಾಯಿತು.ಅದು ಯೆಹೋವ ದೇವರ ಪ್ರತಿದಂಡನೆ;ಆದ್ದರಿಂದ ನೀವೂ ಅದಕ್ಕೆ ಮುಯ್ಯಿತೀರಿಸಿರಿ.ಅದು ಇತರರಿಗೆ ಮಾಡಿದ ಹಾಗೆಯೇ ಅದಕ್ಕೆ ಮಾಡಿರಿ. 16 ಬಿತ್ತುವವನನ್ನೂ, ಸುಗ್ಗಿಕಾಲದಲ್ಲಿ ಕುಡುಗೋಲುಹಿಡಿಯುವವನನ್ನೂ ಬಾಬಿಲೋನಿನೊಳಗಿಂದ ಕಡಿದುಬಿಡಿರಿ;ಕಷ್ಟಪಡುವ ಖಡ್ಗದ ಭಯದಿಂದಅವರು ತಮ್ಮ ತಮ್ಮ ಜನರ ಬಳಿಗೆ ತಿರುಗಿಕೊಳ್ಳುವರು;ತಮ್ಮ ತಮ್ಮ ದೇಶಗಳಿಗೆ ಓಡಿಹೋಗುವರು. 17 “ಇಸ್ರಾಯೇಲನು ಚದರಿಹೋದ ಕುರಿಯಾಗಿದ್ದನು;ಸಿಂಹಗಳು ಅವನನ್ನು ಓಡಿಸಿಬಿಟ್ಟವು;ಮೊದಲು ಅಸ್ಸೀರಿಯನ ಅರಸನುಅವನನ್ನು ತಿಂದುಬಿಟ್ಟನು.ಕಡೆಯಲ್ಲಿ ಬಾಬಿಲೋನಿನ ಅರಸನಾದಈ ನೆಬೂಕದ್ನೆಚ್ಚರನು ಅವನ ಎಲುಬುಗಳನ್ನು ಮುರಿದಿದ್ದಾನೆ.” 18 ಆದ್ದರಿಂದ ಇಸ್ರಾಯೇಲಿನ ದೇವರಾದ ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ:“ಇಗೋ, ನಾನು ಅಸ್ಸೀರಿನ ಅರಸನನ್ನು ಶಿಕ್ಷಿಸಿದ ಹಾಗೆಬಾಬಿಲೋನಿನ ಅರಸನನ್ನೂ, ಅವನ ದೇಶವನ್ನೂ ಶಿಕ್ಷಿಸುತ್ತೇನೆ. 19 ಇಸ್ರಾಯೇಲನನ್ನು ಅವನ ನಿವಾಸಕ್ಕೆ ತಿರುಗಿ ಬರಮಾಡುತ್ತೇನೆ;ಅವನು ಕರ್ಮೆಲಿನಲ್ಲಿಯೂ, ಬಾಷಾನಿನಲ್ಲಿಯೂ ಮೇಯುವನು;ಅವನ ಪ್ರಾಣವು ಎಫ್ರಾಯೀಮ್ ಬೆಟ್ಟದಲ್ಲಿಯೂ,ಗಿಲ್ಯಾದಿನಲ್ಲಿಯೂ ತೃಪ್ತಿ ಹೊಂದುವುದು.” 20 ಯೆಹೋವ ದೇವರು ಹೇಳುತ್ತಾರೆ,“ಆ ದಿವಸಗಳಲ್ಲಿಯೂ,ಆ ಕಾಲದಲ್ಲಿಯೂ ಇಸ್ರಾಯೇಲಿನ ಅಕ್ರಮವನ್ನು ಹುಡುಕಿದರೂ,ಅಲ್ಲಿ ಏನೂ ಇರದು;ಯೆಹೂದದ ಪಾಪಗಳನ್ನು ಹುಡುಕಿದರೂಅವು ಸಿಕ್ಕುವುದಿಲ್ಲ.ಏಕೆಂದರೆ ನಾನು ಉಳಿಸುವವರನ್ನು ಮನ್ನಿಸುತ್ತೇನೆ. 21 “ಮೆರಾಥಯಿಮ್ ದೇಶಕ್ಕೆ ವಿರೋಧವಾಗಿ,ಪೆಕೋದಿನ ನಿವಾಸಿಗಳಿಗೆ ವಿರೋಧವಾಗಿಯೂ ದಂಡೆತ್ತಿ ಹೋಗು;ಅವರನ್ನು ಹಿಂದಟ್ಟಿ ಸಂಹರಿಸು. ಸಂಪೂರ್ಣ ನಾಶಮಾಡು.”“ನಾನು ನಿನಗೆ ಆಜ್ಞಾಪಿಸಿದ್ದೆಲ್ಲದರ ಪ್ರಕಾರ ಮಾಡು,ಎಂದು ಯೆಹೋವ ದೇವರು ಹೇಳುತ್ತಾರೆ. 22 ಯುದ್ಧದ ಶಬ್ದವೂ,ದೊಡ್ಡ ನಾಶನವೂ ದೇಶದಲ್ಲಿ ಇರುವುದು. 23 ಇಗೋ, ಲೋಕವನ್ನೆಲ್ಲಾ ಹೊಡೆದಸುತ್ತಿಗೆಯು ಮುರಿದು ತುಂಡುತುಂಡಾಯಿತು!ಹೇಗೆ ಬಾಬೆಲ್ ರಾಜ್ಯವುಜನಾಂಗಗಳ ನಡುವೆ ಹಾಳಾಯಿತಲ್ಲಾ! 24 ನಾನು ಬೋನನ್ನು ಇಟ್ಟೆನು;ಹೌದು, ಬಾಬಿಲೋನೇ ನೀನು ಸಿಕ್ಕಿಕೊಂಡೆ.ಆದರೆ ನಿನಗೆ ತಿಳಿಯದೆ ಇತ್ತು.ನೀನು ಯೆಹೋವ ದೇವರಿಗೆ ವಿರೋಧವಾಗಿ ಜಗಳವಾಡಿದ್ದರಿಂದಲೇ ಸಿಕ್ಕಿಕೊಂಡೆ ಮತ್ತು ವಶವಾದೆ. 25 ಯೆಹೋವ ದೇವರು ತನ್ನ ಆಯುಧ ಶಾಲೆಯನ್ನು ತೆರೆದು,ತನ್ನ ರೋಷದ ಆಯುಧಗಳನ್ನು ಹೊರಗೆ ತಂದಿದ್ದಾರೆ.ಏಕೆಂದರೆ ಬಾಬಿಲೋನಿನ ದೇಶದಲ್ಲಿಸಾರ್ವಭೌಮ ಸೇನಾಧೀಶ್ವರ ಯೆಹೋವ ದೇವರಿಗೆ ಕೆಲಸವಿದೆ. 26 ಕಟ್ಟಕಡೆಯ ಮೇರೆಯಿಂದ ಅದಕ್ಕೆ ವಿರೋಧವಾಗಿ ಬನ್ನಿ.ಅದರ ಕಣಜಗಳನ್ನು ತೆರೆಯಿರಿ.ಅದನ್ನು ದಿಬ್ಬಗಳಂತೆ ತುಳಿಯಿರಿ.ಸಂಪೂರ್ಣವಾಗಿ ನಾಶಮಾಡಿರಿ.ಅದಕ್ಕೆ ಒಂದೂ ಉಳಿಯದಿರಲಿ. 27 ಅದರ ಹೋರಿಗಳನ್ನೆಲ್ಲಾ ಕೊಲ್ಲಿರಿ,ಅವು ವಧ್ಯಸ್ಥಾನಕ್ಕೆ ಹೋಗಲಿ,ಅವುಗಳ ಗತಿಯನ್ನು ಏನೆಂದು ಹೇಳಲಿ!ಅವುಗಳಿಗೆ ವಿಪತ್ಕಾಲವು ಒದಗಿದೆ. ದಂಡನೆಯ ದಿನವು ಸಂಭವಿಸಿದೆ. 28 ಅವರು ಚೀಯೋನಿನಲ್ಲಿನಮ್ಮ ದೇವರಾದ ಯೆಹೋವ ದೇವರ ಪ್ರತಿದಂಡನೆಯನ್ನೂ,ಆತನ ಆಲಯದ ಪ್ರತಿದಂಡನೆಯನ್ನೂ ತಿಳಿಸುತ್ತಾ,ಬಾಬಿಲೋನಿನ ದೇಶದಿಂದ ತಪ್ಪಿಸಿಕೊಂಡು ಓಡಿ ಹೋಗುವವರ ಸ್ವರವನ್ನು ಕೇಳಿರಿ. 29 “ಬಾಬಿಲೋನಿಗೆ ವಿರೋಧವಾಗಿಬಿಲ್ಲುಬಾಣಗಾರರನ್ನೆಲ್ಲ ಒಟ್ಟಾಗಿ ಕರೆಯಿರಿ;ಅದರ ಸುತ್ತಲು ದಂಡಿಳಿಸಿರಿಅದರ ನಿವಾಸಿಗಳಲ್ಲಿ ಯಾರೂ ತಪ್ಪಿಸಿಕೊಳ್ಳದ ಹಾಗಿರಲಿ.ಅದರ ಕೃತ್ಯಕ್ಕೆ ತಕ್ಕಂತೆ ಮುಯ್ಯಿತೀರಿಸಿರಿಅದು ಮಾಡಿದಂತೆಯೇ ಅದಕ್ಕೆ ಮಾಡಿ.ಏಕೆಂದರೆ ಅದು ಅಹಂಕಾರದಿಂದಇಸ್ರಾಯೇಲರ ಪರಿಶುದ್ಧ ಯೆಹೋವ ದೇವರನ್ನು ಅಸಡ್ಡೆಮಾಡಿತು. 30 ಆದ್ದರಿಂದ ಅದರ ಯೌವನಸ್ಥರು ಬೀದಿಗಳಲ್ಲಿ ಬೀಳುವರು;ಅದರ ಸೈನಿಕರೆಲ್ಲಾ ಆ ದಿವಸದಲ್ಲಿ ಸುಮ್ಮನಾಗುವರು,”ಎಂದು ಯೆಹೋವ ದೇವರು ಹೇಳುತ್ತಾರೆ. 31 “ಅತಿ ಗರ್ವಿಷ್ಠನೇ, ಇಗೋ,ನಾನು ನಿನಗೆ ವಿರೋಧವಾಗಿದ್ದೇನೆ,”ಎಂದು ಸೈನ್ಯಗಳ ದೇವರಾದಯೆಹೋವ ದೇವರು ಹೇಳುತ್ತಾರೆ.“ಏಕೆಂದರೆ ನಿನ್ನ ದಿವಸವೂ,ನಿನ್ನ ಶಿಕ್ಷೆಯ ಕಾಲವೂ ಬಂತು. 32 ಅಹಂಕಾರದಿಂದ ಕೂಡಿದ ರಾಜ್ಯ ಎಡವಿ ಬೀಳುವುದು.ಅದನ್ನು ಯಾರೂ ಎತ್ತರು.ಅದರ ನಗರಗಳಿಗೆ ಬೆಂಕಿ ಹೊತ್ತಿಸುವೆನು.ಅದು ಸುತ್ತಮುತ್ತಣದನ್ನೆಲ್ಲ ನುಂಗಿಬಿಡುವುದು.” 33 ಸೇನಾಧೀಶ್ವರ ಯೆಹೋವ ದೇವರು ಹೀಗೆ ಹೇಳುತ್ತಾರೆ,“ಇಸ್ರಾಯೇಲರೂ, ಯೆಹೂದ್ಯರೂ ಕೂಡ ಹಿಂಸೆಗೆ ಗುರಿಯಾಗಿದ್ದಾರೆ;ಅವರನ್ನು ಸೆರೆಗೆ ಒಯ್ಯುವವರೆಲ್ಲರುಅವರನ್ನು ಬಿಟ್ಟುಬಿಡುವುದಿಲ್ಲವೆಂದು,ಬಲವಾಗಿ ಪಟ್ಟುಹಿಡಿದಿದ್ದಾರೆ. 34 ಅವರ ವಿಮೋಚಕನು ಬಲಿಷ್ಠನೇ,ಸೇನಾಧೀಶ್ವರ ಯೆಹೋವ ದೇವರೆಂಬುದೇ ಅವರ ಹೆಸರು;ಅವರು ದೇಶಕ್ಕೆ ಶಾಂತಿಯನ್ನು ಕೊಡುವ ಹಾಗೆಯೂ,ಬಾಬಿಲೋನಿನ ನಿವಾಸಿಗಳಿಗೆ ನಡುಗುವಿಕೆಯನ್ನು ಕೊಡುವ ಹಾಗೆಯೂ,ಅವರ ವ್ಯಾಜ್ಯವನ್ನು ಪೂರ್ಣವಾಗಿ ತೀರಿಸುವರು. 35 “ಬಾಬಿಲೋನಿಯರ ಮೇಲೆ ಬೀಳಲಿದೆ ಖಡ್ಗ,”ಎಂದು ಯೆಹೋವ ದೇವರು ಹೇಳುತ್ತಾರೆ.“ಅದರ ಜನಸಾಮಾನ್ಯರನ್ನು, ಪ್ರಧಾನರನ್ನು,ಪಂಡಿತರನ್ನು ಇವರೆಲ್ಲರನ್ನು ಹತಿಸಲಿದೆ ಖಡ್ಗ, 36 ಸುಳ್ಳು ಪ್ರವಾದಿಗಳ ವಿರೋಧವಾಗಿ ಖಡ್ಗ ಉಂಟು;ಅವರು ಮೂರ್ಖರಾಗುವರು;ಅದರ ಪರಾಕ್ರಮಶಾಲಿಗಳಿಗೆ ವಿರೋಧವಾಗಿ ಖಡ್ಗ ಉಂಟು;ಅವರು ಭಯಭ್ರಾಂತಿ ಪಡುವರು. 37 ಅದರ ಕುದುರೆಗಳಿಗೆ ವಿರೋಧವಾಗಿಯೂ,ಅವರ ರಥಗಳಿಗೆ ವಿರೋಧವಾಗಿಯೂ,ಅವರೊಳಗಿರುವ ಎಲ್ಲಾ ಸಕಲ ಜನರಿಗೆ ವಿರೋಧವಾಗಿಯೂ ಖಡ್ಗ ಉಂಟು;ಅವರ ಹೆಂಗಸರಂತೆ ಅಶಕ್ತರಾಗುವರು;ಅದರ ಬೊಕ್ಕಸಗಳಿಗೆ ವಿರೋಧವಾಗಿ ಖಡ್ಗ ಉಂಟು; ಅವು ಕೊಳ್ಳೆಯಾಗುವುವು. 38 ಬೇಗೆಯು ಅವರ ನೀರನ್ನೆಲ್ಲಾ ಹೀರಲಿ;ಅದು ಬತ್ತಿಹೋಗುವುದು;ಏಕೆಂದರೆ ಅದು ವಿಗ್ರಹಗಳ ದೇಶವೇ,ಅವರು ಭಯಂಕರವಾದ ವಿಗ್ರಹಗಳಿಂದ ಹುಚ್ಚರಾದರು. 39 “ಆದ್ದರಿಂದ ಅರಣ್ಯದ ಕಾಡುಮೃಗಗಳು,ನರಿಗಳು ಕೂಡ ಅಲ್ಲಿ ವಾಸಮಾಡುವುವು;ಉಷ್ಟ್ರಪಕ್ಷಿಗಳೂ ಸಹ ಅದರಲ್ಲಿ ವಾಸಮಾಡುವುವು;ತಲತಲಾಂತರಗಳವರೆಗೂ ಯಾರೂ ಅದರಲ್ಲಿ ತಂಗುವುದಿಲ್ಲ. 40 ನಾನು ಕೆಡವಿದ ಸೊದೋಮ್ ಗೊಮೋರ ಪಟ್ಟಣಗಳಲ್ಲಿಯೂಅವುಗಳ ಸುತ್ತಣ ಪಟ್ಟಣಗಳಲ್ಲಿಯೂ ಹೇಗೋ ಹಾಗೆಯೇ,ಎದೋಮಿನಲ್ಲಿಯೂ ಯಾರೂ ವಾಸಮಾಡುವುದಿಲ್ಲ;ಅದರಲ್ಲಿ ಯಾವ ನರಪ್ರಾಣಿಯೂ ತಂಗುವುದಿಲ್ಲ”ಎಂದು ಯೆಹೋವ ದೇವರು ಅನ್ನುತ್ತಾರೆ. 41 “ಇಗೋ, ಒಂದು ಜನಾಂಗವು ಉತ್ತರ ದಿಕ್ಕಿನಿಂದ ಬರುವುದುಅನೇಕ ಅರಸರು ಎಚ್ಚರಗೊಳ್ಳುವರು. ಅವರು ಲೋಕದ ಕಟ್ಟಕಡೆಯಿಂದ ಬರುತ್ತಾರೆ. 42 ಅವರು ಬಿಲ್ಲನ್ನೂ, ಭಲ್ಲೆಯನ್ನೂ ಹಿಡಿದುಕೊಂಡಿದ್ದಾರೆ.ಅವರು ಕ್ರೂರರು, ಕನಿಕರ ತೋರಿಸುವುದಿಲ್ಲ.ಅವರ ಶಬ್ದವು ಸಮುದ್ರದ ಹಾಗೆ ಭೋರ್ಗರೆಯುತ್ತದೆ.ಬಾಬಿಲೋನಿನ ಮಗಳೇ,ನಿನಗೆ ವಿರೋಧವಾಗಿಯೇ ಯುದ್ಧಮಾಡುವುದಕ್ಕೆ ಸಿದ್ಧವಾಗಿರುವ ಶೂರರಂತೆಕುದುರೆಗಳನ್ನು ಹತ್ತಿಕೊಂಡು ಬರುತ್ತಿದ್ದಾರೆ. 43 ಬಾಬಿಲೋನಿನ ಅರಸನು ಅವರ ಸುದ್ದಿಯನ್ನು ಕೇಳಿದ್ದಾನೆ;ಅವನ ಕೈಗಳು ನಿತ್ರಾಣವಾದವು;ಸಂಕಟವೂ, ಹೆರುವ ಸ್ತ್ರೀಯ ಹಾಗೆನೋವೂ ಅವನನ್ನು ಹಿಡಿದವು. 44 ಇಗೋ, ಅವನು ಸಿಂಹದ ಹಾಗೆ ಯೊರ್ದನಿನ ದಟ್ಟ ಅಡವಿಯಿಂದಬಲವಾದ ಗೋಮಾಳಕ್ಕೆ ವಿರೋಧವಾಗಿ ಏರಿ ಬರುವನು;ಆದರೆ ನಾನು ಕ್ಷಣಮಾತ್ರದಲ್ಲಿ ಆ ಬಾಬಿಲೋನಿಯರನ್ನು ಅಲ್ಲಿಂದ ದೂರವಾಗಿ ಓಡಿಸಿಬಿಡುವೆನು;ಅದನ್ನು ಕಾಯುವುದಕ್ಕೆ ನಾನು ಆರಿಸಿಕೊಂಡವನನ್ನೇ ನೇಮಿಸುವೆನು. ನನಗೆ ಸಮಾನನು ಯಾರು?ನನ್ನನ್ನು ನ್ಯಾಯವಿಚಾರಣೆಗೆ ಕರೆಯುವವನು ಯಾರು?ನನಗೆ ಎದುರಾಗಿ ನಿಲ್ಲತಕ್ಕ ಕುರುಬನು ಯಾರು?” 45 ಆದ್ದರಿಂದ ಯೆಹೋವ ದೇವರು ಬಾಬಿಲೋನಿಗೆ ವಿರೋಧವಾಗಿ ಮಾಡಿದ ಆಲೋಚನೆಯನ್ನೂ,ಅವರು ಬಾಬಿಲೋನಿಯರ ದೇಶಕ್ಕೆ ವಿರೋಧವಾಗಿ ಮಾಡಿದ ಯೋಜನೆಗಳನ್ನೂ ಕೇಳಿರಿ;ಕಾಡುಮೃಗಗಳು ನಿಶ್ಚಯವಾಗಿ, ಹಿಂಡಿನ ಮರಿಗಳನ್ನು ಎಳೆದುಕೊಂಡು ಹೋಗುವವು;ಖಂಡಿತವಾಗಿ, ಅವುಗಳ ಹುಲ್ಲುಗಾವಲು ಅವುಗಳ ನಾಶನಕ್ಕಾಗಿ ಬೆದರುವುದು. 46 ಬಾಬಿಲೋನು ಶತ್ರುವಶ ಆಯಿತೆಂಬ ಕೋಲಾಹಲಕ್ಕೆ ಭೂಮಿಯು ಕಂಪಿಸುವುದು;ಅದರ ಕೂಗು ಜನಾಂಗಗಳೊಳಗೆ ಕೇಳಬಂತು.