Matthew 5 (BOKCV2)
1 ಯೇಸು ಜನರ ಗುಂಪನ್ನು ಕಂಡು, ಒಂದು ಬೆಟ್ಟವನ್ನೇರಿ ಕುಳಿತುಕೊಂಡರು. ಶಿಷ್ಯರು ಅವರ ಬಳಿಗೆ ಬಂದರು. 2 ಮತ್ತು ಯೇಸು ಅವರಿಗೆ ಉಪದೇಶಿಸಲು ಪ್ರಾರಂಭಿಸಿದರು.ಅವರು ಹೀಗೆ ಹೇಳಿದರು: 3 “ಆತ್ಮದಲ್ಲಿ ಬಡವರಾಗಿರುವವರು ಧನ್ಯರು,ಪರಲೋಕ ರಾಜ್ಯವು ಅವರದು. 4 ದುಃಖಿಸುವವರು ಧನ್ಯರು,ಅವರು ಆದರಣೆ ಹೊಂದುವರು. 5 ಸಾತ್ವಿಕರು ಧನ್ಯರು,ಅವರು ಭೂಮಿಗೆ ಬಾಧ್ಯರಾಗುವರು. 6 ನೀತಿಗೋಸ್ಕರ ಹಸಿದು ಬಾಯಾರುವವರು ಧನ್ಯರು,ಅವರು ತೃಪ್ತಿಹೊಂದುವರು. 7 ಕರುಣೆಯುಳ್ಳವರು ಧನ್ಯರು,ಅವರು ಕರುಣೆ ಪಡೆಯುವರು. 8 ಹೃದಯದಲ್ಲಿ ಶುದ್ಧರಾಗಿರುವವರು ಧನ್ಯರು,ಅವರು ದೇವರನ್ನು ಕಾಣುವರು. 9 ಸಮಾಧಾನ ಪಡಿಸುವವರು ಧನ್ಯರು,ಅವರು ದೇವರ ಮಕ್ಕಳೆನಿಸಿಕೊಳ್ಳುವರು. 10 ನೀತಿಯ ನಿಮಿತ್ತವಾಗಿ ಹಿಂಸೆಗೊಳಗಾಗುವವರು ಧನ್ಯರು,ಪರಲೋಕ ರಾಜ್ಯವು ಅವರದು. 11 “ನನ್ನ ನಿಮಿತ್ತವಾಗಿ ಜನರು ನಿಮ್ಮನ್ನು ನಿಂದಿಸಿ, ಹಿಂಸಿಸಿ ನಿಮ್ಮ ಮೇಲೆ ಎಲ್ಲಾ ವಿಧವಾದ ಕೆಟ್ಟ ಮಾತುಗಳನ್ನು ಸುಳ್ಳಾಗಿ ಹೊರಿಸಿದರೆ ನೀವು ಧನ್ಯರು. 12 ಸಂತೋಷಪಟ್ಟು ಆನಂದಿಸಿರಿ. ಏಕೆಂದರೆ ಪರಲೋಕದಲ್ಲಿ ನಿಮಗೆ ಮಹಾ ಪ್ರತಿಫಲ ಸಿಕ್ಕುವುದು. ಅವರು ನಿಮಗಿಂತ ಮುಂಚೆ ಇದ್ದ ಪ್ರವಾದಿಗಳನ್ನು ಸಹ ಇದೇ ರೀತಿಯಲ್ಲಿ ಹಿಂಸೆಪಡಿಸಿದರು. 13 “ನೀವು ಭೂಮಿಗೆ ಉಪ್ಪಾಗಿದ್ದೀರಿ. ಉಪ್ಪು ಸಪ್ಪಗಾದರೆ, ಅದಕ್ಕೆ ಉಪ್ಪಿನ ರುಚಿ ಹೇಗೆ ಬಂದೀತು? ಅದು ಹೊರಗೆ ಹಾಕಿ ತುಳಿಯುವುದಕ್ಕೆ ಯೋಗ್ಯವೇ ಹೊರತು ಬೇರೆ ಯಾವ ಕೆಲಸಕ್ಕೂ ಬರುವುದಿಲ್ಲ. 14 “ನೀವು ಲೋಕಕ್ಕೆ ಬೆಳಕಾಗಿದ್ದೀರಿ; ಬೆಟ್ಟದ ಮೇಲಿರುವ ಊರು ಮರೆಯಾಗಿರಲಾರದು. 15 ದೀಪವನ್ನು ಹಚ್ಚಿ ಯಾರೂ ಅಳೆಯುವ ಪಾತ್ರೆಯೊಳಗೆ ಇಡುವುದಿಲ್ಲ, ಅದನ್ನು ದೀಪಸ್ತಂಭದ ಮೇಲೆ ಇಡುತ್ತಾರೆ. ಆಗ ಅದು ಮನೆಯಲ್ಲಿರುವವರೆಲ್ಲರಿಗೆ ಬೆಳಕು ಕೊಡುತ್ತದೆ. 16 ಅದೇ ರೀತಿಯಲ್ಲಿ ನಿಮ್ಮ ಬೆಳಕು ಜನರ ಮುಂದೆ ಪ್ರಕಾಶಿಸಲಿ; ಹೀಗಾದರೆ ಜನರು ನಿಮ್ಮ ಸತ್ಕ್ರಿಯೆಗಳನ್ನು ಕಂಡು ಪರಲೋಕದಲ್ಲಿರುವ ನಿಮ್ಮ ತಂದೆಯನ್ನು ಮಹಿಮೆಪಡಿಸುವರು. 17 “ಮೋಶೆಯ ನಿಯಮವನ್ನಾಗಲಿ, ಪ್ರವಾದನೆಗಳನ್ನಾಗಲಿ ರದ್ದು ಮಾಡುವುದಕ್ಕೆ ನಾನು ಬಂದೆನೆಂದು ಭಾವಿಸಬೇಡಿರಿ; ನಾನು ಅವುಗಳನ್ನು ರದ್ದುಗೊಳಿಸಲು ಬರಲಿಲ್ಲ, ನೆರವೇರಿಸಲು ಬಂದಿದ್ದೇನೆ. 18 ಭೂಮಿ ಆಕಾಶಗಳು ಗತಿಸಿಹೋಗುವವು, ಆದರೆ ನಿಯಮವೆಲ್ಲಾ ನೆರವೇರುವ ತನಕ ಅದರಲ್ಲಿ ಒಂದು ಚಿಕ್ಕ ಅಕ್ಷರವಾದರೂ ಚಿಕ್ಕ ಚುಕ್ಕೆಯಾದರೂ ಅಳಿದುಹೋಗುವುದಿಲ್ಲ ಎಂದು ನಾನು ನಿಮಗೆ ಸತ್ಯವಾಗಿ ಹೇಳುತ್ತೇನೆ. 19 ಆದ್ದರಿಂದ ಈ ಆಜ್ಞೆಗಳಲ್ಲಿ ಅತ್ಯಂತ ಚಿಕ್ಕದಾದ ಒಂದನ್ನು ಮೀರಿ, ಹಾಗೆಯೇ ಮೀರಲು ಇತರರಿಗೆ ಬೋಧಿಸುವವನು ಪರಲೋಕ ರಾಜ್ಯದಲ್ಲಿ ಅತಿ ಚಿಕ್ಕವನೆಂದು ಎನಿಸಿಕೊಳ್ಳುವನು. ಆದರೆ ಈ ಆಜ್ಞೆಗಳನ್ನು ಪಾಲಿಸಿ ಇತರರಿಗೆ ಬೋಧಿಸುವವನು ಪರಲೋಕ ರಾಜ್ಯದಲ್ಲಿ ದೊಡ್ಡವನೆಂದು ಎನಿಸಿಕೊಳ್ಳುವನು. 20 ನಿಮ್ಮ ನೀತಿಯು ಫರಿಸಾಯರ ಮತ್ತು ನಿಯಮ ಬೋಧಕರ ನೀತಿಗಿಂತಲೂ ಹೆಚ್ಚಿನದಾಗದಿದ್ದರೆ, ನೀವು ಪರಲೋಕ ರಾಜ್ಯವನ್ನು ಸೇರಲಾರಿರಿ ಎಂದು ನಿಮಗೆ ಹೇಳುತ್ತೇನೆ. 21 “ ‘ನರಹತ್ಯೆ ಮಾಡಬಾರದು, ಯಾವನಾದರೂ ನರಹತ್ಯೆ ಮಾಡಿದರೆ ಅವನು ನ್ಯಾಯತೀರ್ಪಿಗೆ ಗುರಿಯಾಗುವನು,’ ಎಂದು ನಿಮ್ಮ ಪೂರ್ವಿಕರಿಗೆ ಹೇಳಿದ್ದನ್ನು ನೀವು ಕೇಳಿದ್ದೀರಷ್ಟೇ. 22 ಆದರೆ ನಾನು ನಿಮಗೆ ಹೇಳುವುದೇನೆಂದರೆ: ತನ್ನ ಸಹೋದರನ ಮೇಲೆ ಕೋಪಿಸಿಕೊಳ್ಳುವ ಪ್ರತೀ ಮನುಷ್ಯನು ನ್ಯಾಯತೀರ್ಪಿಗೆ ಗುರಿಯಾಗುವನು. ಮಾತ್ರವಲ್ಲದೆ, ಯಾವನಾದರೂ ತನ್ನ ಸಹೋದರನನ್ನು ‘ಬುದ್ಧಿ ಇಲ್ಲದವನೇ’ ಎಂದರೂ ನ್ಯಾಯಸಭೆಯ ವಿಚಾರಣೆಗೆ ಒಳಗಾಗುವನು. ಯಾರನ್ನಾದರೂ, ‘ಮೂರ್ಖಾ,’ ಎನ್ನುವವನು ಅಗ್ನಿನರಕಕ್ಕೆ ಗುರಿಯಾಗುವನು. 23 “ಆದ್ದರಿಂದ, ನೀನು ನಿನ್ನ ಕಾಣಿಕೆಯನ್ನು ಸಮರ್ಪಿಸಲು ಬಲಿಪೀಠದ ಬಳಿಗೆ ತಂದಾಗ, ನಿನ್ನ ಸಹೋದರನಿಗೆ ಅಥವಾ ನಿನ್ನ ಸಹೋದರಿಗೆ ನಿನ್ನ ಮೇಲೆ ಏನೋ ವಿರೋಧವಿದೆ ಎಂಬುದು ನಿನ್ನ ನೆನಪಿಗೆ ಬಂದರೆ, 24 ನಿನ್ನ ಕಾಣಿಕೆಯನ್ನು ಬಲಿಪೀಠದ ಮುಂದೆಯೇ ಬಿಟ್ಟು ಹೋಗಿ ಮೊದಲು ಸಹೋದರನೊಡನೆ ಅಥವಾ ಸಹೋದರಿಯೊಡನೆ ಸಂಧಾನಮಾಡಿಕೋ; ಆಮೇಲೆ ಬಂದು ನಿನ್ನ ಕಾಣಿಕೆಯನ್ನು ಸಮರ್ಪಿಸು. 25 “ನಿನ್ನ ಎದುರಾಳಿ ನಿನ್ನನ್ನು ನ್ಯಾಯಾಲಯಕ್ಕೂ, ನ್ಯಾಯಾಧಿಪತಿಯು ನಿನ್ನನ್ನು ಅಧಿಕಾರಿಗೆ ಒಪ್ಪಿಸಿ ಸೆರೆಮನೆಗೆ ಹಾಕದಿರುವುದಕ್ಕೂ, ಎದುರಾಳಿಯ ಸಂಗಡ ದಾರಿಯಲ್ಲಿರುವಾಗಲೇ ಬೇಗ ಸಮಾಧಾನ ಮಾಡಿಕೋ. 26 ಇಲ್ಲದಿದ್ದರೆ, ನೀನು ಕೊನೆಯ ಪೈಸೆಯನ್ನಾದರೂ ಸಲ್ಲಿಸುವವರೆಗೂ ಅಲ್ಲಿಂದ ಹೊರಗೆ ಬರುವುದೇ ಇಲ್ಲವೆಂದು ನಿನಗೆ ಸತ್ಯವಾಗಿ ಹೇಳುತ್ತೇನೆ. 27 “ ‘ವ್ಯಭಿಚಾರ ಮಾಡಬಾರದು,’ ಎಂದು ಹೇಳಿದ್ದನ್ನು ನೀವು ಕೇಳಿದ್ದೀರಷ್ಟೇ. 28 ಆದರೆ ಒಬ್ಬ ಸ್ತ್ರೀಯನ್ನು ಕಾಮದೃಷ್ಟಿಯಿಂದ ನೋಡುವ ಪ್ರತಿಯೊಬ್ಬನೂ ಆಗಲೇ ತನ್ನ ಹೃದಯದಲ್ಲಿ ಆಕೆಯ ಸಂಗಡ ವ್ಯಭಿಚಾರ ಮಾಡಿದ್ದಾನೆ ಎಂದು ನಾನು ನಿಮಗೆ ಹೇಳುತ್ತೇನೆ. 29 ಆದ್ದರಿಂದ ನಿನ್ನ ಬಲಗಣ್ಣು ನಿನ್ನ ಪಾಪಕ್ಕೆ ಕಾರಣವಾದರೆ, ಅದನ್ನು ನೀನು ಕಿತ್ತೆಸೆದುಬಿಡು. ಏಕೆಂದರೆ ನಿನ್ನ ಇಡೀ ದೇಹ ನರಕದಲ್ಲಿ ಎಸೆಯುವುದಕ್ಕಿಂತ ನಿನ್ನ ಒಂದು ಅಂಗವು ನಾಶವಾಗುವುದು ನಿನಗೆ ಒಳಿತು. 30 ನಿನ್ನ ಬಲಗೈ ನಿನ್ನ ಪಾಪಕ್ಕೆ ಕಾರಣವಾದರೆ, ಅದನ್ನು ನೀನು ಕತ್ತರಿಸಿ ಬಿಸಾಡಿಬಿಡು; ಏಕೆಂದರೆ ನಿನ್ನ ಇಡೀ ದೇಹ ನರಕದಲ್ಲಿ ಎಸೆಯುವುದಕ್ಕಿಂತ ನಿನ್ನ ಒಂದು ಅಂಗವು ನಾಶವಾಗುವುದು ನಿನಗೆ ಒಳಿತು. 31 “ಇದಲ್ಲದೆ, ‘ತನ್ನ ಹೆಂಡತಿಯನ್ನು ಬಿಡುವವನು ಆಕೆಗೆ ವಿವಾಹ ವಿಚ್ಛೇದನ ಪತ್ರವನ್ನು ಕೊಡಲಿ,’ ಎಂದು ಹೇಳಿದೆಯಷ್ಟೆ. 32 ನಾನು ನಿಮಗೆ ಹೇಳುವುದೇನೆಂದರೆ, ಹಾದರದ ಕಾರಣದಿಂದಲ್ಲದೆ ತನ್ನ ಹೆಂಡತಿಯನ್ನು ಬಿಟ್ಟುಬಿಡುವವನು ಅವಳು ವ್ಯಭಿಚಾರ ಮಾಡುವುದಕ್ಕೆ ಕಾರಣನಾಗುತ್ತಾನೆ; ವಿವಾಹ ವಿಚ್ಛೇದನೆ ಹೊಂದಿದವಳನ್ನು ಮದುವೆ ಆಗುವವನು ವ್ಯಭಿಚಾರ ಮಾಡಿದವನಾಗುತ್ತಾನೆ. 33 “ ‘ಇದಲ್ಲದೆ ನೀನು ಆಣೆಯಿಟ್ಟರೆ ಅದನ್ನು ಮೀರಬಾರದು, ಕರ್ತನಿಗೆ ಮಾಡಿದ ಆಣೆಗಳನ್ನು ನೆರವೇರಿಸಲೇಬೇಕು,’ ಎಂದು ನಿಮ್ಮ ಪೂರ್ವಿಕರಿಗೆ ಹೇಳಿರುವುದನ್ನು ಕೇಳಿದ್ದೀರಿ. 34 ಆದರೆ ನಾನು ನಿಮಗೆ ಹೇಳುವುದೇನೆಂದರೆ, ಆಣೆಯಿಡಲೇ ಬೇಡಿರಿ. ಪರಲೋಕದ ಮೇಲೆ ಆಣೆ ಇಡಬೇಡಿರಿ, ಏಕೆಂದರೆ ಅದು ದೇವರ ಸಿಂಹಾಸನವು; 35 ಭೂಮಿಯ ಮೇಲೆ ಆಣೆ ಇಡಬೇಡಿರಿ, ಏಕೆಂದರೆ ಅದು ದೇವರ ಪಾದಪೀಠವು. ಯೆರೂಸಲೇಮಿನ ಮೇಲೆ ಆಣೆ ಇಡಬೇಡಿರಿ, ಏಕೆಂದರೆ ಅದು ಮಹಾರಾಜನ ಪಟ್ಟಣವಾಗಿದೆ. 36 ನಿನ್ನ ತಲೆಯ ಮೇಲೂ ಆಣೆಯಿಡುವುದು ಬೇಡ, ಏಕೆಂದರೆ ನೀನು ಒಂದು ಕೂದಲನ್ನಾದರೂ ಬೆಳ್ಳಗೆ ಅಥವಾ ಕಪ್ಪಗೆ ಮಾಡಲಾರೆ. 37 ಆದ್ದರಿಂದ ನಿಮ್ಮ ಮಾತು ಹೌದಾದರೆ ‘ಹೌದು’ ಇಲ್ಲವಾದರೆ ‘ಇಲ್ಲ’ ಎಂದಿರಲಿ. ಇದಕ್ಕಿಂತ ಹೆಚ್ಚಿನದು ಕೆಡುಕನಿಂದ ಬಂದದ್ದು. 38 “ ‘ಕಣ್ಣಿಗೆ ಕಣ್ಣು, ಹಲ್ಲಿಗೆ ಹಲ್ಲು,’ ಎಂದು ಹೇಳಿರುವುದನ್ನು ನೀವು ಕೇಳಿದ್ದೀರಿ. 39 ಆದರೆ ನಾನು ನಿಮಗೆ ಹೇಳುವುದೇನೆಂದರೆ, ಕೆಡುಕನನ್ನು ಎದುರಿಸಬೇಡಿರಿ. ಯಾವನಾದರೂ ನಿನ್ನ ಬಲಗೆನ್ನೆಗೆ ಹೊಡೆದರೆ, ಅವನಿಗೆ ಮತ್ತೊಂದು ಕೆನ್ನೆಯನ್ನೂ ತಿರುಗಿಸಿಕೊಡು. 40 ನಿನ್ನೊಡನೆ ವ್ಯಾಜ್ಯ ಮಾಡಿ ನಿನ್ನ ಅಂಗಿಯನ್ನು ನಿನ್ನಿಂದ ಕಿತ್ತುಕೊಳ್ಳುವವನಿಗೆ, ನಿನ್ನ ಮೇಲಂಗಿಯನ್ನೂ ಕೊಟ್ಟುಬಿಡು. 41 ಯಾವನಾದರೂ ನಿನ್ನನ್ನು ಒಂದು ಕಿಲೋಮೀಟರು ದೂರ ಬಾ ಎಂದು ಒತ್ತಾಯ ಮಾಡಿದರೆ, ಅವನೊಡನೆ ಎರಡು ಕಿಲೋಮೀಟರು ದೂರ ಹೋಗು; 42 ಕೇಳುವವನಿಗೆ ಕೊಡು, ನಿನ್ನಿಂದ ಸಾಲ ಕೇಳುವವನ ಕಡೆಯಿಂದ ಮುಖ ತಿರುಗಿಸಿಕೊಳ್ಳಬೇಡ. 43 “ ‘ನಿನ್ನ ನೆರೆಯವನನ್ನು ಪ್ರೀತಿಸಿ, ನಿನ್ನ ವೈರಿಯನ್ನು ದ್ವೇಷಿಸು,’ ಎಂದು ಹೇಳಿರುವುದನ್ನು ಕೇಳಿದ್ದೀರಿ. 44 ಆದರೆ ನಾನು ನಿಮಗೆ ಹೇಳುವುದೇನೆಂದರೆ, ನಿಮ್ಮ ವೈರಿಗಳನ್ನು ಪ್ರೀತಿಸಿರಿ, ನಿಮ್ಮನ್ನು ಹಿಂಸಿಸುವವರಿಗೋಸ್ಕರ ಪ್ರಾರ್ಥಿಸಿರಿ. 45 ಹೀಗೆ ಮಾಡಿದರೆ, ನೀವು ಪರಲೋಕದಲ್ಲಿರುವ ನಿಮ್ಮ ತಂದೆಗೆ ಮಕ್ಕಳಾಗುವಿರಿ. ಅವರು ಕೆಟ್ಟವರ ಮೇಲೆಯೂ ಒಳ್ಳೆಯವರ ಮೇಲೆಯೂ ತಮ್ಮ ಸೂರ್ಯನು ಉದಯಿಸುವಂತೆ ಮಾಡುತ್ತಾರೆ. ನೀತಿವಂತರ ಮೇಲೂ ಅನೀತಿವಂತರ ಮೇಲೂ ಮಳೆ ಸುರಿಸುತ್ತಾರೆ. 46 ನಿಮ್ಮನ್ನು ಪ್ರೀತಿಸುವವರನ್ನೇ ನೀವು ಪ್ರೀತಿಸಿದರೆ ನಿಮಗೇನು ಫಲ? ಸುಂಕದವರೂ ಹಾಗೆ ಮಾಡುವುದಿಲ್ಲವೇ? 47 ನಿಮ್ಮ ಸ್ವಂತದವರನ್ನು ಮಾತ್ರ ವಂದಿಸಿದರೆ ಹೆಚ್ಚೇನು ಮಾಡಿದ ಹಾಗಾಯಿತು? ಯೆಹೂದ್ಯರಲ್ಲದವರು ಸಹ ಹಾಗೆಯೇ ಮಾಡುತ್ತಾರಲ್ಲವೇ? 48 ಆದ್ದರಿಂದ, ಪರಲೋಕದಲ್ಲಿರುವ ನಿಮ್ಮ ತಂದೆಯು ಪರಿಪೂರ್ಣರಾಗಿರುವಂತೆ ನೀವೂ ಪರಿಪೂರ್ಣರಾಗಿರಿ.