Romans 11 (BOKCV2)
1 ಹಾಗಾದರೆ, ದೇವರು ತಮ್ಮ ಜನರನ್ನು ತ್ಯಜಿಸಿಬಿಟ್ಟಿದ್ದಾರೋ ಎಂದು ಕೇಳುತ್ತೇನೆ? ಎಂದಿಗೂ ಇಲ್ಲ. ನಾನು ಸಹ ಇಸ್ರಾಯೇಲನೂ ಅಬ್ರಹಾಮನ ವಂಶದವನೂ ಬೆನ್ಯಾಮೀನನ ಕುಲದವನೂ ಆಗಿದ್ದೇನೆ. 2 ದೇವರು ತಾವು ಮುಂದಾಗಿ ತಿಳಿದುಕೊಂಡ ತಮ್ಮ ಜನರನ್ನು ತ್ಯಜಿಸಲಿಲ್ಲ. ದೇವರ ವಾಕ್ಯವು ಎಲೀಯನನ್ನು ಕುರಿತು ಏನು ಹೇಳುತ್ತದೆಂದು ನಿಮಗೆ ಗೊತ್ತಿಲ್ಲವೋ? 3 “ಕರ್ತಾ, ಅವರು ನಿಮ್ಮ ಪ್ರವಾದಿಗಳನ್ನು ಕೊಂದಿದ್ದಾರೆ. ನಿಮ್ಮ ಬಲಿಪೀಠವನ್ನು ಒಡೆದುಹಾಕಿದ್ದಾರೆ, ನಾನು ಒಬ್ಬನೇ ಉಳಿದಿದ್ದೇನೆ. ಅವರು ನನ್ನನ್ನು ಕೊಲ್ಲಲು ಪ್ರಯತ್ನಿಸುತ್ತಿದ್ದಾರೆ,” ಎಂದು ಇಸ್ರಾಯೇಲರಿಗೆ ವಿರೋಧವಾಗಿ ದೇವರಲ್ಲಿ ವಿಜ್ಞಾಪನೆ ಮಾಡಿಕೊಂಡನು. 4 ಅದಕ್ಕೆ ದೇವರು ಅವನಿಗೆ ಕೊಟ್ಟ ಉತ್ತರವೇನಾಗಿತ್ತು? “ಬಾಳನಿಗೆ ಅಡ್ಡಬೀಳದ ಏಳು ಸಾವಿರ ಮಂದಿಯನ್ನು ನನಗೋಸ್ಕರ ಉಳಿಸಿದ್ದೇನೆ,” ಎಂದಲ್ಲವೇ? 5 ಅದೇ ರೀತಿಯಲ್ಲಿ, ಈ ಕಾಲದಲ್ಲಿಯೂ ಕೃಪೆಯಿಂದ ಆಯ್ಕೆಯಾದ ಇಸ್ರಾಯೇಲರಲ್ಲಿ ಕೆಲವರು ಉಳಿದಿದ್ದಾರೆ. 6 ಆ ಆಯ್ಕೆಯು ಕ್ರಿಯೆಗಳ ಆಧಾರದಿಂದಲ್ಲ, ಕೃಪೆಯಿಂದಲೇ ಆಗಿರುತ್ತದೆ. ಕ್ರಿಯೆಗಳಿಂದ ಅದು ಆಗಿದ್ದರೆ ಇನ್ನೆಂದಿಗೂ ಕೃಪೆಯಾಗಲಾರದು. 7 ಹಾಗಾದರೆ ಏನು? ಇಸ್ರಾಯೇಲ್ ಹುಡುಕಿದ್ದನ್ನು ಹೊಂದಲಿಲ್ಲ. ಆದರೆ ಅವರಲ್ಲಿ ಆಯ್ಕೆಯಾದವರು ಹೊಂದಿದರು, ಮಿಕ್ಕವರು ಕಠಿಣ ಹೃದಯಿಗಳಾದರು. 8 ಪವಿತ್ರ ವೇದದಲ್ಲಿ ಬರೆದಿರುವಂತೆ,“ದೇವರು ಅವರಿಗೆ ಜಡಸ್ವಭಾವದ ಆತ್ಮವನ್ನು,ಕಾಣಲಾರದ ಕಣ್ಣನ್ನುಮತ್ತು ಕೇಳಲಾರದ ಕಿವಿಯನ್ನು ಕೊಟ್ಟರು,ಅದು ಇಂದಿನವರೆಗೂ ಹಾಗೆಯೇ ಇದೆ.” 9 ದಾವೀದನು,“ಅವರ ಊಟವೇ ಅವರಿಗೆ ಉರುಲೂ ಬೋನೂ ಆಗಲಿ.ಅದು ಅಡೆತಡೆಯೂ ಪ್ರತಿಕಾರವೂ ಆಗಲಿ. 10 ಅವರ ಕಣ್ಣುಗಳು ಕಾಣದ ಹಾಗೆ ಕತ್ತಲಾಗಲಿ.ಮತ್ತು ಅವರ ಬೆನ್ನು ಎಂದೆಂದಿಗೂ ಬಗ್ಗಿ ಹೋಗಲಿ,”ಎಂದು ಹೇಳುತ್ತಾನೆ. 11 ಇಸ್ರಾಯೇಲರು ಏಳಲಾರದ ಹಾಗೇ ಎಡವಿದರೋ? ಎಂದು ನಾನು ಕೇಳುತ್ತೇನೆ. ಇಲ್ಲವೇ ಇಲ್ಲ! ಆದರೆ, ಇಸ್ರಾಯೇಲರಲ್ಲಿ ಮತ್ಸರ ಉಂಟಾಗುವಂತೆ ಅವರ ಅಪರಾಧದ ನಿಮಿತ್ತ ಯೆಹೂದ್ಯರಲ್ಲದವರಿಗೆ ರಕ್ಷಣೆಯು ಉಂಟಾಯಿತು. 12 ಆದರೆ ಅವರ ಅಪರಾಧವು ಜಗತ್ತಿಗೆ ಐಶ್ವರ್ಯವನ್ನು ಉಂಟುಮಾಡಿತು. ಅವರ ನಷ್ಟವೇ ಯೆಹೂದ್ಯರಲ್ಲದವರಿಗೆ ಐಶ್ವರ್ಯವನ್ನು ಉಂಟುಮಾಡುವುದಾದರೆ, ಅವರ ಪರಿಪೂರ್ಣತೆಯು ಇನ್ನೂ ಎಷ್ಟೋ ಹೆಚ್ಚಾದ ಐಶ್ವರ್ಯವನ್ನು ಉಂಟುಮಾಡಬಹುದಲ್ಲವೇ! 13 ಯೆಹೂದ್ಯರಲ್ಲದವರಾಗಿರುವ ನಿಮ್ಮೊಂದಿಗೆ ಮಾತನಾಡುತ್ತಿದ್ದೇನೆ. ನಾನು ಯೆಹೂದ್ಯರಲ್ಲದವರಿಗೆ ಅಪೊಸ್ತಲನಾಗಿರುವಷ್ಟರ ಮಟ್ಟಿಗೆ ನನ್ನ ಸೇವೆಯನ್ನು ಪ್ರಭಾವಗೊಳಿಸುತ್ತೇನೆ. 14 ಹೇಗೂ ನಾನು ನನ್ನ ಸ್ವಂತ ಜನರಾದ ಯೆಹೂದ್ಯರಲ್ಲಿ ಮತ್ಸರವನ್ನು ಉದ್ರೇಕಿಸಿ ಅವರಲ್ಲಿ ಕೆಲವರನ್ನಾದರೂ ರಕ್ಷಿಸಬೇಕು. 15 ಏಕೆಂದರೆ ಇಸ್ರಾಯೇಲರನ್ನು ತ್ಯಜಿಸುವುದರಿಂದ ಜಗತ್ತು ದೇವರೊಡನೆ ಸಂಧಾನವಾಗುವುದಾದರೆ, ಅವರನ್ನು ಸ್ವೀಕರಿಸುವುದು, ಸತ್ತವರು ಜೀವಿತರಾಗಿ ಎದ್ದು ಬಂದಂತಾಗಿರುವುದಲ್ಲವೇ? 16 ಪ್ರಥಮಫಲವಾಗಿ ಹಿಟ್ಟಿನಲ್ಲಿ ದೇವರಿಗೆ ಭಾಗವನ್ನು ಸಮರ್ಪಿಸಿದ್ದು ಪವಿತ್ರವಾಗಿದ್ದರೆ, ಹಿಟ್ಟೆಲ್ಲಾ ಪವಿತ್ರವಾಗಿರುತ್ತದೆ. ಬೇರು ಪವಿತ್ರವಾಗಿದ್ದರೆ, ಕೊಂಬೆಗಳೂ ಪವಿತ್ರವಾಗಿರುತ್ತವೆ? 17 ಕೆಲವು ಕೊಂಬೆಗಳು ಮುರಿದುಹೋಗಿರುವುದಾದರೆ, ಕಾಡು ಓಲಿವ್ ಮರದಂತಿರುವ ನೀನು ಅವುಗಳ ನಡುವೆ ಕಸಿಮಾಡಿ ಉತ್ತಮ ಓಲಿವ್ ಮರದ ರಸವತ್ತಾದ ಬೇರಿನಲ್ಲಿ ಪಾಲುಹೊಂದಿರಲಾಗಿ, 18 ಆ ಕೊಂಬೆಗಳನ್ನು ಕಡೆಗಣಿಸಿ ನಿನ್ನನ್ನು ಹೆಚ್ಚಿಸಿಕೊಳ್ಳಬೇಡ. ಹೆಚ್ಚಿಸಿಕೊಂಡರೆ, ನೀನು ಆ ಬೇರಿನ ಆಧಾರವಲ್ಲ. ಆ ಬೇರೇ ನಿನಗೆ ಆಧಾರವಾಗಿದೆ. 19 ಹಾಗಾದರೆ ನೀನು, “ನಾನು ಕಸಿಕಟ್ಟಿಸಿಕೊಳ್ಳಬೇಕೆಂದು ಆ ಕೊಂಬೆಗಳನ್ನು ಮುರಿದು ಹಾಕಲಾಯಿತು,” ಎಂದು ನೀನು ಹೇಳಬಹುದು. 20 ಅದು ನಿಜವೆ, ಆದರೆ ಅವರ ಅವಿಶ್ವಾಸದಿಂದಲೇ ಅವರನ್ನು ಮುರಿದು ಹಾಕಲಾಯಿತು. ನೀನಾದರೋ ವಿಶ್ವಾಸದಿಂದಲೇ ಇನ್ನೂ ನಿಂತಿರುವೆ. ಗರ್ವಪಡದೆ ಭಯದಿಂದಿರು. 21 ಏಕೆಂದರೆ ದೇವರು ಹುಟ್ಟು ಕೊಂಬೆಗಳನ್ನು ಉಳಿಸದಿದ್ದ ಮೇಲೆ ನಿನ್ನನ್ನೂ ಉಳಿಸುವುದಿಲ್ಲ. 22 ಆದ್ದರಿಂದ, ದೇವರ ದಯೆಯನ್ನೂ ಕಾಠಿಣ್ಯವನ್ನೂ ನೋಡು. ಬಿದ್ದವರ ಕಡೆಗೆ ಅವರ ಕಾಠಿಣ್ಯವಿದೆ, ನೀನು ದೇವರ ದಯೆಯಲ್ಲಿಯೇ ಮುಂದುವರಿಯುವುದಾದರೆ ನಿನ್ನ ಮೇಲೆ ದೇವರ ದಯೆಯಿರುವುದು. ಇಲ್ಲದೆ ಹೋದರೆ, ನೀನು ಕೂಡ ಕಡಿದುಹಾಕಲಾಗುವೆ. 23 ಇಸ್ರಾಯೇಲರು ಕೂಡ ಇನ್ನೂ ಅವಿಶ್ವಾಸದಲ್ಲಿ ಮುಂದುವರಿಯದಿದ್ದರೆ, ಕಸಿಕಟ್ಟಲಾಗುವರು, ಏಕೆಂದರೆ ಅವರನ್ನು ಪುನಃ ಕಸಿಕಟ್ಟಲು ದೇವರು ಶಕ್ತರಾಗಿರುತ್ತಾರೆ. 24 ಎಷ್ಟಾದರೂ ಕಾಡು ಓಲಿವ್ ಮರದಿಂದ ನೀನು ಕಡಿದುಹಾಕಲಾದ ಕೊಂಬೆ. ನೀನು ನೆಟ್ಟು ಬೆಳೆಸಿರುವ ಉತ್ತಮ ಓಲಿವ್ ಮರಕ್ಕೆ ಅಸ್ವಾಭಾವಿಕವಾಗಿ ಕಸಿಮಾಡುವುದಾದರೆ ಸ್ವಾಭಾವಿಕವಾಗಿರುವ ಈ ಕೊಂಬೆಗಳನ್ನು ಎಷ್ಟೋ ಹೆಚ್ಚಾಗಿ ಓಲಿವ್ ಮರಕ್ಕೆ ಅದೇ ಕಸಿಕಟ್ಟುವುದು ಸುಲಭವಲ್ಲವೇ? 25 ಪ್ರಿಯರೇ, ನೀವು ಈ ಮರ್ಮದ ಬಗ್ಗೆ ಅಜ್ಞಾನಿಗಳಾಗಿರಬೇಕೆಂದು ನಾನು ಬಯಸುವುದಿಲ್ಲ. ಅದೇನೆಂದರೆ, ಯೆಹೂದ್ಯರಲ್ಲದವರು ಪೂರ್ಣಸಂಖ್ಯೆಯಲ್ಲಿ ದೇವರ ಬಳಿಗೆ ಬರುವವರೆಗೆ ಮಾತ್ರ ಇಸ್ರಾಯೇಲರು ತಮ್ಮ ಹೃದಯದ ಕಾಠಿಣ್ಯಕ್ಕೆ ತಾತ್ಕಾಲಿಕವಾಗಿ ಒಳಗಾಗಿರುವರು. 26 ಹೀಗೆ ಪವಿತ್ರ ವೇದದಲ್ಲಿ ಬರೆದಿರುವಂತೆ, ಇಸ್ರಾಯೇಲ್ ಜನರೆಲ್ಲಾ ರಕ್ಷಣೆಹೊಂದುವರು:“ವಿಮೋಚಿಸುವವರು ಒಬ್ಬರು ಚೀಯೋನಿನಿಂದ ಬರುತ್ತಾರೆ,ಅವರು ಯಾಕೋಬನ ಸಂತತಿಯಲ್ಲಿ ದೇವರನ್ನು ಅಲ್ಲಗಳೆಯುವ ಸ್ವಭಾವನ್ನು ತಾವೇ ತೆಗೆದುಹಾಕುವರು. 27 ನಾನು ಅವರ ಪಾಪಗಳನ್ನು ತೆಗೆದುಹಾಕುವಾಗ,ಅವರೊಂದಿಗೆ ನಾನು ಮಾಡಿಕೊಳ್ಳುವ ಒಡಂಬಡಿಕೆ ಇದೇ ಎಂದು ತಿಳಿದುಕೊಳ್ಳುವೆನು,”ಎಂಬುದೇ. 28 ಸುವಾರ್ತೆಯ ಪ್ರಕಾರ ಇಸ್ರಾಯೇಲರು ಈಗ ನಿಮ್ಮ ನಿಮಿತ್ತ ಶತ್ರುಗಳು. ಆದರೆ ದೇವರ ಆಯ್ಕೆಯ ದೃಷ್ಟಿಯಲ್ಲಿ ನೋಡುವಾಗ ಮೂಲಪಿತೃಗಳ ನಿಮಿತ್ತದಿಂದ ಅವರು ಪ್ರೀತಿಹೊಂದಿದವರು. 29 ದೇವರು ಕೊಡುವ ವರಗಳನ್ನು, ಕರೆಗಳನ್ನು ಅವರು ಎಂದಿಗೂ ಹಿಂತೆಗೆದುಕೊಳ್ಳುವವರಲ್ಲ. 30 ಒಂದು ಕಾಲದಲ್ಲಿ ದೇವರಿಗೆ ಅವಿಧೇಯರಾಗಿದ್ದ ನೀವು ಇಸ್ರಾಯೇಲರ ಅವಿಧೇಯತೆಯಿಂದ ಈಗ ಕರುಣೆಯನ್ನು ಹೊಂದಿರುವಿರಿ. 31 ಅದೇ ಪ್ರಕಾರವಾಗಿ ಇಸ್ರಾಯೇಲರು ಈಗ ಅವಿಧೇಯರಾಗಿದ್ದರೂ ನಿಮಗೆ ಕರುಣೆ ದೊರಕಿದಂತೆ, ಅವರಿಗೂ ಈಗ ಕರುಣೆ ದೊರಕುವುದು. 32 ದೇವರು ತಾವು ಎಲ್ಲರಿಗೂ ಕರುಣೆ ತೋರಿಸುವುದಕ್ಕಾಗಿ ಎಲ್ಲರನ್ನೂ ಅವಿಧೇಯತೆಯಲ್ಲಿ ಕಟ್ಟಿಹಾಕಿರುತ್ತಾರೆ. 33 ಆಹಾ! ದೇವರ ಐಶ್ವರ್ಯ, ಜ್ಞಾನ ಮತ್ತು ವಿವೇಕಗಳು ಎಷ್ಟು ಆಳವಾದವುಗಳು!ದೇವರ ತೀರ್ಮಾನಗಳು ಪರೀಶೀಲಿಸಲು ಅಸಾಧ್ಯವಾದದ್ದು!ದೇವರ ಮಾರ್ಗಗಳನ್ನು ಕಂಡುಹಿಡಿಯುವುದು ಅಪರಿಮಿತವಾದದ್ದು! 34 “ಕರ್ತದೇವರ ಮನಸ್ಸನ್ನು ಅರಿತವರು ಯಾರು?ಅವರಿಗೆ ಆಲೋಚನೆಯನ್ನು ನೀಡುವವರು ಯಾರು?” 35 “ದೇವರಿಗೆ ಮೊದಲು ಕೊಟ್ಟು,ಅವರಿಂದ ಪ್ರತಿಫಲವನ್ನು ಪಡೆಯುವವರು ಯಾರು?” 36 ಏಕೆಂದರೆ ಸಮಸ್ತವೂ ದೇವರಿಂದ ಉಂಟಾಗಿ ದೇವರ ಮೂಲಕವಾಗಿಯೂ ದೇವರಿಗಾಗಿಯೂ ಇರುತ್ತವೆ.ಮಹಿಮೆಯು ಸದಾಕಾಲವೂ ದೇವರಿಗೇ ಸಲ್ಲುವುದಾಗಿರಲಿ. ಆಮೆನ್.