Acts 3 (IRVK)
1 ಒಂದು ದಿನ ಪೇತ್ರ ಮತ್ತು ಯೋಹಾನನು ಮಧ್ಯಾಹ್ನದ ಮೇಲೆ ಮೂರು ಘಂಟೆಗೆ ನಡೆಯತ್ತಿದ್ದ ಪ್ರಾರ್ಥನೆಗಾಗಿ ದೇವಾಲಯಕ್ಕೆ ಹೋದರು. 2 ಅಲ್ಲಿ ಹುಟ್ಟು ಕುಂಟನಾಗಿದ್ದ ಒಬ್ಬ ಮನುಷ್ಯನನ್ನು ಕೆಲವರು ಹೊತ್ತುಕೊಂಡು ಬಂದರು; ದೇವಾಲಯದೊಳಕ್ಕೆ ಹೋಗುವವರಿಂದ ಭಿಕ್ಷೆಬೇಡುವುದಕ್ಕಾಗಿ ದೇವಾಲಯದ ಸುಂದರದ್ವಾರವೆಂಬ ಬಾಗಿಲಿನಲ್ಲಿ ಅವನನ್ನು ಪ್ರತಿದಿನ ಕೂರಿಸುತ್ತಿದ್ದರು. 3 ಅವನು ದೇವಾಲಯದೊಳಕ್ಕೆ ಹೋಗುತ್ತಿರುವ ಪೇತ್ರ ಮತ್ತು ಯೋಹಾನರನ್ನು ಕಂಡು ಭಿಕ್ಷೆ ಬೇಡಿದನು. 4 ಪೇತ್ರ, ಯೋಹಾನರಿಬ್ಬರೂ ಅವನನ್ನು ದೃಷ್ಟಿಸಿ ನೋಡಿದರು. ಪೇತ್ರನು ಅವನಿಗೆ “ನಮ್ಮನ್ನು ನೋಡು” ಅಂದನು. 5 ಅವನು ಅವರಿಂದ ಏನಾದರೂ ದೊರಕೀತೆಂದು ನಿರೀಕ್ಷಿಸಿ, ಅವರನ್ನು ಲಕ್ಷ್ಯವಿಟ್ಟು ನೋಡಿದನು. 6 ಆಗ ಪೇತ್ರನು “ಬೆಳ್ಳಿ ಬಂಗಾರವಂತೂ ನನ್ನಲ್ಲಿಲ್ಲ, ನನ್ನಲ್ಲಿರುವುದನ್ನು ನಿನಗೆ ಕೊಡುತ್ತೇನೆ; ನಜರೇತಿನ ಯೇಸು ಕ್ರಿಸ್ತನ ಹೆಸರಿನಲ್ಲಿ ಎದ್ದು ನಡೆ” ಎಂದು ಹೇಳಿ, 7 ಅವನನ್ನು ಬಲಗೈಹಿಡಿದು ಎತ್ತಿದನು. ತಕ್ಷಣವೇ ಅವನ ಅಂಗಾಲುಗಳಿಗೆ, ಮುಂಗಾಲುಗಳಿಗೆ ಹಾಗು ಹಿಮ್ಮಡಿಗಳಿಗೂ ಬಲಬಂದಿತು. 8 ಅವನು ಹಾರಿ ನಿಂತು ನಡೆದಾಡಿದನು; ನಡೆಯುತ್ತಾ, ಕುಣಿಯುತ್ತಾ ದೇವರನ್ನು ಕೊಂಡಾಡುತ್ತಾ ಅವರ ಜೊತೆಯಲ್ಲಿ ದೇವಾಲಯದೊಳಗೆ ಹೋದನು. 9 ಅವನು ನಡೆಯುತ್ತಾ ದೇವರನ್ನು ಕೊಂಡಾಡುತ್ತಾ ಇರುವದನ್ನು ಜನರೆಲ್ಲರು ನೋಡಿ; 10 ಇವನು ದೇವಾಲಯದ ಸುಂದರ ದ್ವಾರವೆಂಬ ಬಾಗಿಲಿನಲ್ಲಿ ಕುಳಿತು ಭಿಕ್ಷೆಬೇಡುತ್ತಿದ್ದವನೆಂದು ಗುರುತುಹಿಡಿದು, ಅವನಿಗೆ ಸಂಭವಿಸಿರುವ ಅದ್ಭುತಕಾರ್ಯಕ್ಕೆ ವಿಸ್ಮಯಗೊಂಡು ಬಹಳ ಬೆರಗಾದರು. 11 ಗುಣಹೊಂದಿದ ಕುಂಟನು ಪೇತ್ರ ಮತ್ತು ಯೋಹಾನನ್ನು ಹಿಡುಕೊಂಡೇ ಇರುವಾಗ, ಆಶ್ಚರ್ಯಪಡುತ್ತಿರುವ ಆ ಜನರೆಲ್ಲರು ಸೊಲೊಮೋನನದೆಂದು ಹೆಸರುಳ್ಳ ಮಂಟಪಕ್ಕೆ ಒಟ್ಟಾಗಿ ಓಡಿಬಂದರು. 12 ಪೇತ್ರನು ಇದನ್ನು ನೋಡಿ ಜನರಿಗೆ; “ಇಸ್ರಾಯೇಲ್ ಜನರೇ, ಈ ಘಟನೆಯಿಂದ ನೀವೇಕೆ ಆಶ್ಚರ್ಯಚಕಿತರಾಗಿದ್ದೀರಿ? ನೀವು ನಮ್ಮನೇಕೆ ಈ ರೀತಿ ದೃಷ್ಟಿಯಿಟ್ಟು ನೋಡುತ್ತಿದ್ದಿರಿ? ನಾವು ನಮ್ಮ ಸ್ವಂತ ಶಕ್ತಿಯಿಂದಾಗಲಿ, ನಮ್ಮ ದೈವಭಕ್ತಿಯಿಂದಾಗಲಿ ಇವನನ್ನು ನಡೆಯುವಂತೆ ಮಾಡಿದೆವೆಂದು ಭಾವಿಸಬೇಡಿರಿ. 13 ನಮ್ಮ ಪೂರ್ವಿಕರಾದ ಅಬ್ರಹಾಮ ಇಸಾಕ ಯಾಕೋಬರ ದೇವರು ತನ್ನ ಸೇವಕನಾದ ಯೇಸುವನ್ನು ಮಹಿಮೆಪಡಿಸಿದ್ದಾನೆ. ನೀವಂತೂ ಆತನನ್ನು ಪಿಲಾತನಿಗೆ ಹಿಡಿದುಕೊಟ್ಟಿರಿ; ಮತ್ತು ಪಿಲಾತನು ಆತನನ್ನು ಬಿಡಿಸಬೇಕೆಂದು ನಿರ್ಣಯಿಸಿದಾಗ, ಆತನ ಮುಂದೆ ಆತನನ್ನು ಧಿಕ್ಕರಿಸಿ ಬೇಡವೆಂದು ಕೂಗಿದ್ದೀರಿ. 14 ನೀವು ಪರಿಶುದ್ಧನೂ, ನೀತಿವಂತನೂ ಆಗಿರುವ ಯೇಸುವನ್ನು ಬೇಡವೆಂದು ಹೇಳಿ ಕೊಲೆಗಾರನಾದ ಒಬ್ಬನನ್ನು ಬಿಡಿಸಿಕೊಡಬೇಕೆಂದು ಬೇಡಿಕೊಂಡು ಜೀವದಾಯಕನಾದ ಕ್ರಿಸ್ತನನ್ನು ಕೊಲ್ಲಿಸಿದ್ದೀರಿ. 15 ಆದರೆ ದೇವರು ಆತನನ್ನು ಸತ್ತವರೊಳಗಿಂದ ಎಬ್ಬಿಸಿದನು; ಈ ವಿಷಯದಲ್ಲಿ ನಾವೇ ಸಾಕ್ಷಿಗಳು. 16 ನೀವು ನೋಡುತ್ತಿರುವಂತಹ, ನಿಮಗೆ ಗುರುತಿರುವಂತಹ ಈ ಮನುಷ್ಯನು ಗುಣವಾಗುವುದಕ್ಕೆ ಯೇಸುವಿನ ಹೆಸರಿನಲ್ಲಿ ಇಟ್ಟ ಅವನ ನಂಬಿಕೆಯೇ ಕಾರಣ; ಆ ಹೆಸರೇ ಇವನನ್ನು ಬಲಪಡಿಸಿತು. ಆತನ ಮೂಲಕ ಉಂಟಾಗಿರುವ ನಂಬಿಕೆಯೇ ಇವನಿಗೆ ನಿಮ್ಮೆಲ್ಲರ ಮುಂದೆ ಸಂಪೂರ್ಣಸೌಖ್ಯವನ್ನು ಕೊಟ್ಟಿತು. 17 “ಸಹೋದರರೇ, ಅದಿರಲಿ, ನೀವು ಆ ಕಾರ್ಯವನ್ನು ತಿಳಿಯದೆ ಮಾಡಿದಿರೆಂದು ಬಲ್ಲೆನು; ನಿಮ್ಮ ಅಧಿಕಾರಿಗಳೂ ಅದನ್ನು ತಿಳಿಯದೆ ಮಾಡಿದರು. 18 ಆದರೆ, ಕ್ರಿಸ್ತನು ಕಷ್ಟಗಳನ್ನನುಭವಿಸಬೇಕೆಂದು, ದೇವರು ಎಲ್ಲಾ ಪ್ರವಾದಿಗಳ ಮೂಲಕ ಮುಂಚಿತವಾಗಿ ಹೇಳಿಸಿದ ಮಾತುಗಳನ್ನು ಹೀಗೆ ನೆರವೇರಿಸಿದನು. 19 ಆದುದರಿಂದ ನಿಮ್ಮ ಪಾಪಗಳನ್ನು ಅಳಿಸಿಬಿಡುವ ಹಾಗೆ ನೀವು ಪಶ್ಚಾತ್ತಾಪಪಟ್ಟು ಆತನ ಕಡೆಗೆ ತಿರುಗಿಕೊಳ್ಳಿರಿ. ಹಾಗೆ ತಿರುಗಿದರೆ ಕರ್ತನ, ಸನ್ನಿಧಾನದಿಂದ 20 ಪುನರುಜ್ಜೀವನದ ಕಾಲಗಳು ಒದಗಿ ಆತನು ನಿಮಗೆ ನೇಮಕವಾಗಿರುವ ಕ್ರಿಸ್ತನಾದ ಯೇಸುವನ್ನು ಕಳುಹಿಸಿಕೊಡುವನು. 21 ಆದರೆ ಸಮಸ್ತವನ್ನು ಸರಿಮಾಡುವ ಕಾಲವು ಬರುವ ತನಕ ಪರಲೋಕವೇ ಕ್ರಿಸ್ತನ ಸ್ಥಾನವಾಗಿರಬೇಕು. ಆ ಕಾಲದ ವಿಷಯವಾಗಿ ದೇವರು ಪೂರ್ವದಲ್ಲಿದ್ದ ತನ್ನ ಪರಿಶುದ್ಧ ಪ್ರವಾದಿಗಳ ಮುಖಾಂತರ ಹೇಳಿಸಿದ್ದಾನೆ. 22 ಮೋಶೆಯು ಹೇಳಿದ್ದೇನಂದರೆ, ‘ದೇವರಾಗಿರುವ ಕರ್ತನು ನನ್ನ ಹಾಗೆ ನಿಮ್ಮ ಸಹೋದರರಲ್ಲಿ ಮತ್ತೊಬ್ಬ ಪ್ರವಾದಿಯನ್ನು ನಿಮಗೆ ಎಬ್ಬಿಸುವನು; ಆತನು ಹೇಳುವ ಎಲ್ಲಾ ಮಾತುಗಳಿಗೆ ನೀವು ಕಿವಿಗೊಡಬೇಕು. 23 ಆ ಪ್ರವಾದಿಯ ಮಾತನ್ನು ಕೇಳದಿರುವ ಪ್ರತಿಯೊಬ್ಬನು ನಮ್ಮ ಜನರೊಳಗಿಂದ ಸಂಪೂರ್ಣವಾಗಿ ನಾಶವಾಗುವನು’ ಎಂಬುದೇ. 24 ಇದಲ್ಲದೆ ಸಮುವೇಲನೂ, ಅವನ ತರುವಾಯ ಬಂದು ಪ್ರವಾದಿಸಿದ ಎಲ್ಲಾ ಪ್ರವಾದಿಗಳೂ ಸಹ ಈಗಿನ ದಿನಗಳನ್ನು ಕುರಿತು ತಿಳಿಸಿರುವರು. 25 ನೀವು ಆ ಪ್ರವಾದಿಗಳ ಶಿಷ್ಯರು, ದೇವರು ನಮ್ಮ ಪೂರ್ವಿಕರ ಸಂಗಡ ಮಾಡಿಕೊಂಡ ಒಡಂಬಡಿಕೆಗೆ ಬಾಧ್ಯರೂ ಆಗಿದ್ದೀರಿ. ಆತನು ಅಬ್ರಹಾಮನಿಗೆ ‘ನಿನ್ನ ಸಂತತಿಯ ಮೂಲಕ ಭೂಲೋಕದ ಎಲ್ಲಾ ಕುಲದವರಿಗೂ ಆಶೀರ್ವಾದವುಂಟಾಗುವುದು’ ಎಂದು ಹೇಳಿ ಆ ಒಡಂಬಡಿಕೆಯನ್ನು ಮಾಡಿಕೊಂಡನಲ್ಲಾ. 26 ಮೊದಲು ನಿಮಗಾಗಿಯೇ ದೇವರು ತನ್ನ ಸೇವಕನನ್ನು ಪ್ರತಿಷ್ಠೆಪಡಿಸಿ ಈತನು ನಿಮ್ಮಲ್ಲಿ ಪ್ರತಿಯೊಬ್ಬನನ್ನು ಅವನವನ ಕೆಟ್ಟ ನಡತೆಗಳಿಂದ ತಿರುಗಿಸಿ ನಿಮ್ಮನ್ನು ಆಶೀರ್ವದಿಸಬೇಕೆಂದು ಆತನನ್ನು ಕಳುಹಿಸಿಕೊಟ್ಟಿದ್ದಾನೆ” ಎಂದು ಹೇಳಿದನು.