John 19 (IRVK)
1 ಆನಂತರ ಪಿಲಾತನು ಯೇಸುವನ್ನು ಕರೆದುಕೊಂಡು ಹೋಗಿ ಆತನನ್ನು ಕೊರಡೆಯಿಂದ ಹೊಡೆಸಿದನು. 2 ಸಿಪಾಯಿಗಳು ಮುಳ್ಳಿನ ಕಿರೀಟವನ್ನು ಹೆಣೆದು ಆತನ ತಲೆಯ ಮೇಲೆ ಇಟ್ಟು, ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ಆತನಿಗೆ ತೊಡಿಸಿ, 3 ಆತನ ಬಳಿಗೆ ಬಂದು “ಯೆಹೂದ್ಯರ ಅರಸನೇ, ನಿನಗೆ ನಮಸ್ಕಾರ” ಎಂದು ಹೇಳಿ ತಮ್ಮ ಕೈಗಳಿಂದ ಆತನ ಕೆನ್ನೆಗೆ ಹೊಡೆದರು. 4 ತರುವಾಯ ಪಿಲಾತನು ಪುನಃ ಹೊರಗೆ ಹೋಗಿ ಯೆಹೂದ್ಯರಿಗೆ, “ನನಗೆ ಅವನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲವೆಂಬುದು ನಿಮಗೆ ತಿಳಿಯುವಂತೆ ಅವನನ್ನು ನಿಮ್ಮ ಬಳಿಗೆ ತರುತ್ತೇನೆ ನೋಡಿರಿ” ಎಂದು ಹೇಳಿದನು. 5 ಯೇಸು ಮುಳ್ಳಿನ ಕಿರೀಟವನ್ನು ಮತ್ತು ಕೆನ್ನೇರಳೆ ಬಣ್ಣದ ನಿಲುವಂಗಿಯನ್ನು ಧರಿಸಿದವನಾಗಿ ಹೊರಗೆ ಬಂದನು. ಆಗ ಪಿಲಾತನು ಅವರಿಗೆ, “ಇಗೋ, ಈ ಮನುಷ್ಯನು” ಎಂದನು. 6 ಮುಖ್ಯಯಾಜಕರೂ ಮತ್ತು ಕಾವಲುಗಾರರು ಆತನನ್ನು ಕಾಣುತ್ತಲೇ, “ಶಿಲುಬೆಗೆ ಹಾಕಿಸು, ಶಿಲುಬೆಗೆ ಹಾಕಿಸು” ಎಂದು ಕೂಗಿದರು. ಪಿಲಾತನು ಅವರಿಗೆ, “ಬೇಕಾದರೆ ನೀವೇ ಅವನನ್ನು ತೆಗೆದುಕೊಂಡು ಹೋಗಿ ಶಿಲುಬೆಗೆ ಹಾಕಿರಿ, ನನಗೆ ಆತನಲ್ಲಿ ಯಾವ ಅಪರಾಧವೂ ಕಾಣಿಸಲಿಲ್ಲ” ಎಂದನು. 7 ಯೆಹೂದ್ಯರು ಅವನಿಗೆ, “ನಮಗೆ ಒಂದು ನೇಮ ಉಂಟು. ಆ ನೇಮದ ಪ್ರಕಾರ ಆತನು ಸಾಯಲೇಬೇಕು. ಏಕೆಂದರೆ ಆತನು ತನ್ನನ್ನು ದೇವರ ಮಗನಾಗಿ ಮಾಡಿಕೊಂಡಿದ್ದಾನೆ” ಎಂದರು. 8 ಪಿಲಾತನು ಈ ಮಾತನ್ನು ಕೇಳಿ ಬಹಳವಾಗಿ ಭಯಪಟ್ಟನು, 9 ಪುನಃ ತನ್ನ ಅರಮನೆಯೊಳಗೆ ಹೋಗಿ, “ನೀನು ಎಲ್ಲಿಂದ ಬಂದವನು?” ಎಂದು ಯೇಸುವನ್ನು ಕೇಳಿದನು, ಆದರೆ ಯೇಸು ಆತನಿಗೆ ಉತ್ತರಕೊಡಲಿಲ್ಲ. 10 ಪಿಲಾತನು, “ನೀನು ನನ್ನೊಡನೆ ಮಾತನಾಡುವುದಿಲ್ಲವೋ? ನಿನ್ನನ್ನು ಬಿಡಿಸುವ ಅಧಿಕಾರವೂ ಮತ್ತು ನಿನ್ನನ್ನು ಶಿಲುಬೆಗೆ ಹಾಕಿಸುವ ಅಧಿಕಾರವೂ ನನಗೆ ಉಂಟೆಂಬುದು ನಿನಗೆ ಗೊತ್ತಿಲ್ಲವೋ?” ಎಂದು ಆತನನ್ನು ಕೇಳಿದನು. 11 ಅದಕ್ಕೆ ಯೇಸು, “ಮೇಲಿನಿಂದ ನಿನಗೆ ಕೊಡಲ್ಪಡದಿದ್ದರೆ ನನ್ನ ಮೇಲೆ ನಿನಗೆ ಯಾವ ಅಧಿಕಾರವೂ ಇರುತ್ತಿರಲಿಲ್ಲ. ಆದಕಾರಣ ನನ್ನನ್ನು ನಿನಗೆ ಒಪ್ಪಿಸಿದವನಿಗೆ ಹೆಚ್ಚಿನ ಪಾಪವಿದೆ” ಎಂದು ಉತ್ತರ ಕೊಟ್ಟನು. 12 ಈ ಮಾತಿನಿಂದ ಪಿಲಾತನು ಆತನನ್ನು ಬಿಡಿಸಲು ಪ್ರಯತ್ನಿಸಿದನು, ಆದರೆ ಯೆಹೂದ್ಯರು, “ನೀನು ಈ ಮನುಷ್ಯನನ್ನು ಬಿಡಿಸಿದರೆ, ನೀನು ಕೈಸರನಿಗೆ ಮಿತ್ರನಲ್ಲ, ತನ್ನನ್ನು ತಾನೇ ಅರಸನಾಗಿ ಮಾಡಿಕೊಳ್ಳುವವನು, ಕೈಸರನಿಗೆ ವಿರೋಧಿ” ಎಂದು ಕೂಗಿ ಹೇಳಿದರು. 13 ಈ ಮಾತುಗಳನ್ನು ಪಿಲಾತನು ಕೇಳಿ ಯೇಸುವನ್ನು ಹೊರಗೆ ಕರೆದುಕೊಂಡು ಬಂದು ಇಬ್ರಿಯ ಮಾತಿನಲ್ಲಿ, ಗಬ್ಬಥಾ ಎಂದು ಕರೆಯಲ್ಪಟ್ಟ, “ಕಲ್ಲು ಹಾಸಿದ ಕಟ್ಟೆ” ಎಂಬ ಸ್ಥಳಕ್ಕೆ ಹೋಗಿ ನ್ಯಾಯಾಸನದ ಮೇಲೆ ಕುಳಿತುಕೊಂಡನು. 14 ಅದು ಪಸ್ಕ ಹಬ್ಬಕ್ಕೆ ಸಿದ್ಧಮಾಡುವ ದಿನದಲ್ಲಿ ಹೆಚ್ಚು ಕಡಿಮೆ ಬೆಳಿಗ್ಗೆ ಆರು ಘಂಟೆಯಾಗಿತ್ತು. ಅವನು ಯೆಹೂದ್ಯರಿಗೆ, “ಇಗೋ, ನಿಮ್ಮ ಅರಸನು” ಎಂದು ಹೇಳಿದನು. 15 ಅದಕ್ಕೆ ಅವರು, “ಅವನನ್ನು ಕೊಲ್ಲಿಸು, ಕೊಲ್ಲಿಸು, ಶಿಲುಬೆಗೆ ಹಾಕಿಸು” ಎಂದು ಕೂಗಿದರು. ಅದಕ್ಕೆ ಪಿಲಾತನು, “ನಿಮ್ಮ ಅರಸನನ್ನು ಶಿಲುಬೆಗೆ ಹಾಕಿಸಲೋ?” ಎಂದು ಹೇಳಿದಕ್ಕೆ, ಮುಖ್ಯಯಾಜಕರು, “ಕೈಸರನೇ, ಹೊರತು ನಮಗೆ ಬೇರೆ ಅರಸನಿಲ್ಲ” ಎಂದು ಉತ್ತರ ಕೊಟ್ಟರು. 16 ಆಗ ಅವನು ಯೇಸುವನ್ನು ಶಿಲುಬೆಗೆ ಹಾಕಿಸುವುದಕ್ಕೆ ಅವರ ವಶಕ್ಕೆ ಒಪ್ಪಿಸಿ ಕೊಟ್ಟನು. ಅವರು ಯೇಸುವನ್ನು ತೆಗೆದುಕೊಂಡು ಹೋದರು. 17 ಆತನು ತನ್ನ ಶಿಲುಬೆಯನ್ನು ತಾನೇ ಹೊತ್ತುಕೊಂಡು “ಕಪಾಲಸ್ಥಳ” ಎಂಬ ಸ್ಥಳಕ್ಕೆ ಹೋದನು. ಇದನ್ನು ಇಬ್ರಿಯ ಭಾಷೆಯಲ್ಲಿ “ಗೊಲ್ಗೊಥಾ” ಎಂದು ಕರೆಯುತ್ತಾರೆ. 18 ಅಲ್ಲಿ ಆತನನ್ನೂ ಆತನ ಜೊತೆಯಲ್ಲಿ ಇನ್ನಿಬ್ಬರನ್ನೂ ಶಿಲುಬೆಗೆ ಹಾಕಿದರು. ಅವರಲ್ಲಿ ಆ ಕಡೆ ಒಬ್ಬನನ್ನು, ಈ ಕಡೆ ಒಬ್ಬನನ್ನು, ನಡುವೆ ಯೇಸುವನ್ನು ಇಟ್ಟರು. 19 ಇದಲ್ಲದೆ ಪಿಲಾತನು “ನಜರೇತಿನ ಯೇಸು, ಯೆಹೂದ್ಯರ ಅರಸನು” ಎಂದು ಒಂದು ಫಲಕವನ್ನು ಬರೆದು ಅದನ್ನು ಆತನ ಶಿಲುಬೆಯ ಮೇಲಿಡಿಸಿದ್ದನು. 20 ಅವರು ಯೇಸುವನ್ನು ಶಿಲುಬೆಗೆ ಹಾಕಿದ ಸ್ಥಳವು ಪಟ್ಟಣಕ್ಕೆ ಹತ್ತಿರವಾಗಿದ್ದುದರಿಂದ ಯೆಹೂದ್ಯರಲ್ಲಿ ಅನೇಕರು ಆ ಫಲಕವನ್ನು ಓದಿದರು. ಅದು ಇಬ್ರಿಯ, ಲ್ಯಾಟಿನ್ ಮತ್ತು ಗ್ರೀಕ್ ಭಾಷೆಗಳಲ್ಲಿ ಬರೆದಿತ್ತು. 21 ಹೀಗಿರಲಾಗಿ ಯೆಹೂದ್ಯರ ಮುಖ್ಯಯಾಜಕರು ಪಿಲಾತನಿಗೆ, “‘ಯೆಹೂದ್ಯರ ಅರಸನು’ ಎಂದು ಬರೆಯಬೇಡ, ‘ನಾನು ಯೆಹೂದ್ಯರ ಅರಸನೆಂದು ಹೇಳಿದ್ದಾನೆ’ ಎಂಬುದಾಗಿ ಬರೆಯಬೇಕು” ಎಂದು ಹೇಳಿದರು. 22 ಅದಕ್ಕೆ ಪಿಲಾತನು, “ನಾನು ಬರೆದದ್ದು ಬರೆದಾಯಿತು” ಎಂದು ಉತ್ತರ ಕೊಟ್ಟನು. 23 ಸಿಪಾಯಿಗಳು ಯೇಸುವನ್ನು ಶಿಲುಬೆಗೆ ಹಾಕಿದ ಮೇಲೆ ಅವರು ಆತನ ವಸ್ತ್ರಗಳನ್ನು ತೆಗೆದುಕೊಂಡು ನಾಲ್ಕು ಪಾಲು ಮಾಡಿ ಒಬ್ಬೊಬ್ಬ ಸಿಪಾಯಿಗೆ ಒಂದೊಂದು ಭಾಗದಂತೆ ಹಂಚಿಕೊಂಡರು. ಆತನ ಒಳಂಗಿಯನ್ನು ಸಹ ತೆಗೆದುಕೊಂಡರು. ಆದರೆ ಆ ಅಂಗಿಗೆ ಹೊಲಿಗೆ ಇರಲಿಲ್ಲ. ಅದು ಮೇಲಿನಿಂದ ಕೆಳಗಿನವರೆಗೆ ಹೆಣೆದದ್ದಾಗಿತ್ತು. 24 ಆಮೇಲೆ ಅವರು, “ನಾವು ಇದನ್ನು ಹರಿಯಬಾರದು ಚೀಟು ಹಾಕಿ, ಇದು ಯಾರಿಗೆ ಬರುವುದೋ ನೋಡೋಣ” ಎಂದು ಮಾತನಾಡಿಕೊಂಡರು. ಇದರಿಂದ “ನನ್ನ ಬಟ್ಟೆಗಳನ್ನು ತಮ್ಮಲ್ಲಿ ಪಾಲುಮಾಡಿಕೊಂಡರು. ನನ್ನ ಅಂಗಿಗೋಸ್ಕರ ಚೀಟು ಹಾಕಿದರು” ಎಂಬ ಧರ್ಮಶಾಸ್ತ್ರದ ಮಾತು ನೆರವೇರಿತು. ಸಿಪಾಯಿಗಳು ಇದನ್ನೆಲ್ಲಾ ಮಾಡಿದರು. 25 ಯೇಸುವಿನ ಶಿಲುಬೆಯ ಬಳಿಯಲ್ಲಿ ಆತನ ತಾಯಿಯೂ, ಆತನ ತಾಯಿಯ ತಂಗಿಯೂ, ಕ್ಲೋಪನ ಹೆಂಡತಿಯಾದ ಮರಿಯಳೂ, ಮಗ್ದಲದ ಮರಿಯಳೂ ನಿಂತಿದ್ದರು. 26 ಯೇಸು ತನ್ನ ತಾಯಿಯನ್ನೂ ಹತ್ತಿರದಲ್ಲಿ ನಿಂತಿದ್ದ ತನ್ನ ಪ್ರೀತಿಯ ಶಿಷ್ಯನನ್ನೂ ನೋಡಿ ತನ್ನ ತಾಯಿಗೆ, “ಸ್ತ್ರೀಯೇ, ಇಗೋ, ನಿನ್ನ ಮಗನು” ಎಂದು ಹೇಳಿದನು. 27 ತರುವಾಯ ಆ ಶಿಷ್ಯನಿಗೆ, “ಇಗೋ, ನಿನ್ನ ತಾಯಿ” ಎಂದು ಹೇಳಿದನು. ಆ ಗಳಿಗೆಯಿಂದ ಆ ಶಿಷ್ಯನು ಆಕೆಯನ್ನು ತನ್ನ ಸ್ವಂತ ಮನೆಯಲ್ಲೇ ಇರಿಸಿಕೊಂಡನು. 28 ಇದಾದ ಮೇಲೆ ಯೇಸು ಈಗ ಎಲ್ಲ ಪೂರ್ತಿಯಾಗಿದೆಯೆಂದು ತಿಳಿದು, ಧರ್ಮಶಾಸ್ತ್ರದ ಮಾತು ನೆರವೇರುವಂತೆ, “ನನಗೆ ನೀರಡಿಕೆಯಾಗಿದೆ” ಎಂದನು. 29 ಆಗ ಅಲ್ಲಿ ಹುಳಿರಸ ತುಂಬಿದ ಪಾತ್ರೆಯಿತ್ತು. ಅವರು ಸ್ಪಂಜನ್ನು ಹುಳಿರಸದಲ್ಲಿ ಅದ್ದಿ ಹಿಸ್ಸೋಪ್ ಗಿಡದ ಕೋಲಿಗೆ ಸಿಕ್ಕಿಸಿ ಆತನ ಬಾಯಿಗೆ ಮುಟ್ಟಿಸಿದರು. 30 ಯೇಸು ಆ ಹುಳಿರಸವನ್ನು ತೆಗೆದುಕೊಂಡ ಮೇಲೆ, “ತೀರಿತು” ಎಂದು ಹೇಳಿ ತಲೆ ಬಾಗಿಸಿ ತನ್ನ ಆತ್ಮವನ್ನು ಒಪ್ಪಿಸಿಕೊಟ್ಟನು. 31 ಅದು ಸಿದ್ಧತೆಯ ದಿನವಾದುದರಿಂದ ಯೆಹೂದ್ಯರು, ಸಬ್ಬತ್ ದಿನದಲ್ಲಿ ಮೃತದೇಹಗಳು ಶಿಲುಬೆಯ ಮೇಲೆ ಇರಬಾರದೆಂದು, ಪಿಲಾತನನ್ನು ಅವರ ಕಾಲುಗಳನ್ನು ಮುರಿದು ಅವರನ್ನು ತೆಗೆದುಬಿಡಬೇಕೆಂದು ಕೇಳಿಕೊಂಡರು, ಏಕೆಂದರೆ ಆ ಸಬ್ಬತ್ ದಿನವು ಬಹು ವಿಶೇಷವಾದದ್ದು. 32 ಅದರಂತೆ ಸಿಪಾಯಿಗಳು ಬಂದು ಮೊದಲನೆಯವನ ಕಾಲುಗಳನ್ನು ಅವನ ಜೊತೆಯಲ್ಲಿ ಶಿಲುಬೆಗೆ ಹಾಕಿಸಿಕೊಂಡಿದ್ದ ಮತ್ತೊಬ್ಬನ ಕಾಲುಗಳನ್ನು ಮುರಿದರು. 33 ಆದರೆ ಯೇಸುವಿನ ಬಳಿಗೆ ಬಂದಾಗ ಆತನು ಆಗಲೇ ಸತ್ತಿರುವುದನ್ನು ಅವರು ಕಂಡು ಆತನ ಕಾಲುಗಳನ್ನು ಮುರಿಯಲಿಲ್ಲ. 34 ಆದರೆ ಸಿಪಾಯಿಗಳಲ್ಲಿ ಒಬ್ಬನು ಈಟಿಯಿಂದ ಆತನ ಪಕ್ಕೆಯನ್ನು ತಿವಿದನು. ಕೂಡಲೆ ರಕ್ತವೂ ನೀರೂ ಹೊರಗೆ ಬಂದವು. 35 ಅದನ್ನು ಕಂಡವನೇ ಸಾಕ್ಷಿ ಹೇಳಿದ್ದಾನೆ. ಅವನ ಸಾಕ್ಷಿಯು ಸತ್ಯವೇ; ತಾನು ಹೇಳುವುದು ಸತ್ಯವೆಂದು ಅವನು ಬಲ್ಲನು. ನೀವು ಸಹ ನಂಬಬೇಕೆಂದು ಇದನ್ನು ಹೇಳಿದ್ದಾನೆ. 36 ಏಕೆಂದರೆ “ಆತನ ಎಲುಬುಗಳಲ್ಲಿ ಒಂದನ್ನಾದರೂ ಮುರಿಯಬಾರದು” ಎಂದು ಧರ್ಮಶಾಸ್ತ್ರದಲ್ಲಿ ಬರೆದ ಮಾತು ನೆರವೇರುವಂತೆ ಇದಾಯಿತು. 37 “ಅವರು ತಾವು ಇರಿದವನನ್ನು ದೃಷ್ಟಿಸಿನೋಡುವರು” ಎಂದು ಧರ್ಮಶಾಸ್ತ್ರದಲ್ಲಿ ಮತ್ತೊಂದು ಮಾತು ಹೇಳಿ ಅದೆ. 38 ಇದಾದ ಮೇಲೆ ಯೆಹೂದ್ಯರ ಭಯದಿಂದ ಗುಪ್ತವಾಗಿ ಯೇಸುವಿನ ಶಿಷ್ಯನಾಗಿದ್ದ ಅರಿಮಥಾಯದ ಯೋಸೇಫನು ಯೇಸುವಿನ ದೇಹವನ್ನು ತೆಗೆದುಕೊಂಡು ಹೋಗುವುದಕ್ಕೆ ಅಪ್ಪಣೆಯಾಗಬೇಕೆಂದು ಪಿಲಾತನನ್ನು ಕೇಳಿಕೊಂಡನು. ಆಗ ಪಿಲಾತನು ಅಪ್ಪಣೆ ಕೊಡಲಾಗಿ, ಅವನು ಬಂದು ಆತನ ದೇಹವನ್ನು ತೆಗೆದುಕೊಂಡು ಹೋದನು. 39 ಇದಲ್ಲದೆ ಮೊದಲು ಒಂದು ಸಾರಿ ರಾತ್ರಿ ವೇಳೆಯಲ್ಲಿ ಯೇಸುವಿನ ಬಳಿಗೆ ಬಂದಿದ್ದ ನಿಕೊದೇಮನು ಸಹ ರಕ್ತಬೋಳ ಅಗರುಗಳನ್ನು ಕಲಸಿದ ಚೂರ್ಣವನ್ನು ನೂರು ಸೇರಿನಷ್ಟು ತೆಗೆದುಕೊಂಡು ಅಲ್ಲಿಗೆ ಬಂದನು. 40 ಆಗ ಅವರು ಯೇಸುವಿನ ದೇಹವನ್ನು ತೆಗೆದುಕೊಂಡು ಯೆಹೂದ್ಯರಲ್ಲಿ ಹೂಣಿಡುವ ಪದ್ಧತಿಯ ಪ್ರಕಾರ ಅದನ್ನು ಆ ಸುಗಂಧ ದ್ರವ್ಯಗಳ ಸಹಿತವಾಗಿ ನಾರುಬಟ್ಟೆಯಲ್ಲಿ ಸುತ್ತಿದರು. 41 ಆತನನ್ನು ಶಿಲುಬೆಗೆ ಹಾಕಿದ ಸ್ಥಳದಲ್ಲಿ ಒಂದು ತೋಟವಿತ್ತು ಮತ್ತು ಆ ತೋಟದಲ್ಲಿ ಒಂದು ಹೊಸ ಸಮಾಧಿ ಇತ್ತು. ಅದರಲ್ಲಿ ಅದುವರೆಗೂ ಯಾರನ್ನೂ ಇಟ್ಟಿರಲಿಲ್ಲ. 42 ಆ ದಿನವು ಯೆಹೂದ್ಯರ ಸಿದ್ಧತೆಯ ದಿನವಾದ್ದುದರಿಂದಲೂ ಆ ಸಮಾಧಿಯು ಸಮೀಪವಾಗಿದ್ದುದರಿಂದಲೂ ಅವರು ಯೇಸುವಿನ ದೇಹವನ್ನು ಅಲ್ಲಿ ಸಮಾಧಿಯಲ್ಲಿಟ್ಟರು.