Acts 25 (BOKCV2)
1 ಫೆಸ್ತನು ಅಧಿಕಾರವಹಿಸಿಕೊಂಡು ಮೂರು ದಿನಗಳ ನಂತರ ಕೈಸರೈಯದಿಂದ ಯೆರೂಸಲೇಮಿಗೆ ಹೋದನು. 2 ಅಲ್ಲಿ ಮುಖ್ಯಯಾಜಕರು ಹಾಗೂ ಯೆಹೂದ್ಯ ನಾಯಕರು ಅವರ ಮುಂದೆ ಬಂದು ಪೌಲನಿಗೆ ವಿರೋಧವಾಗಿ ಆರೋಪ ಮಾಡಿದರು. 3 ತಮಗೆ ದಯೆತೋರಿ ಪೌಲನನ್ನು ಕೂಡಲೇ ಯೆರೂಸಲೇಮಿಗೆ ವರ್ಗಾಯಿಸಬೇಕೆಂದು ಫೆಸ್ತನನ್ನು ಬೇಡಿಕೊಂಡರು. ಏಕೆಂದರೆ ಪೌಲನು ಹಿಂದಿರುಗುವಾಗ ಮಾರ್ಗದಲ್ಲೇ ಅವನನ್ನು ಕೊಲ್ಲಬೇಕೆಂದು ಹೊಂಚುಹಾಕಿಕೊಂಡಿದ್ದರು. 4 ಆದ್ದರಿಂದ ಫೆಸ್ತನು ಉತ್ತರವಾಗಿ, “ಪೌಲನು ಕೈಸರೈಯದಲ್ಲಿ ಕಾವಲೊಳಗಿದ್ದಾನೆ. ನಾನೇ ಅಲ್ಲಿಗೆ ಬೇಗ ಹೊಗಬೇಕೆಂದಿದ್ದೇನೆ. 5 ನಿಮ್ಮಲ್ಲಿಯ ಕೆಲವು ನಾಯಕರು ನನ್ನೊಂದಿಗೆ ಅಲ್ಲಿಗೆ ಬರಲಿ. ಅವನೇನಾದರೂ ತಪ್ಪು ಮಾಡಿದ್ದರೆ ಅವನ ಮೇಲಿನ ದೂರುಗಳನ್ನು ಆಪಾದಿಸಲಿ,” ಎಂದನು. 6 ಎಂಟು ಹತ್ತು ದಿನಗಳನ್ನು ಅವರೊಂದಿಗೆ ಕಳೆದ ತರುವಾಯ ಅವನು ಕೈಸರೈಯಕ್ಕೆ ಹೋದನು. ಮರುದಿನ ನ್ಯಾಯಸ್ಥಾನದಲ್ಲಿ ಕುಳಿತುಕೊಂಡು ತನ್ನ ಮುಂದೆ ಪೌಲನನ್ನು ಕರೆತರಬೇಕೆಂದು ಆಜ್ಞಾಪಿಸಿದನು. 7 ಪೌಲನು ಅಲ್ಲಿಗೆ ಬಂದಾಗ, ಯೆರೂಸಲೇಮಿನಿಂದ ಬಂದ ಯೆಹೂದ್ಯರು ಅವನ ಸುತ್ತಲೂ ಎದ್ದು ನಿಂತು, ಅನೇಕ ತೀವ್ರ ಆಪಾದನೆಗಳನ್ನು ಅವನ ವಿರುದ್ಧ ಹೊರಿಸಿದರು. ಆದರೆ ಅವುಗಳನ್ನು ರುಜುವಾತುಪಡಿಸಲು ಅವರಿಗೆ ಸಾಧ್ಯವಾಗಲಿಲ್ಲ. 8 ಆಗ ಪೌಲನು ತನ್ನ ಪ್ರತಿವಾದವನ್ನು ಮುಂದಿಟ್ಟು: “ನಾನು ಯೆಹೂದ್ಯರ ನಿಯಮಕ್ಕೆ ವಿರೋಧವಾಗಲಿ, ದೇವಾಲಯಕ್ಕೆ ವಿರೋಧವಾಗಲಿ, ಕೈಸರನ ವಿರೋಧವಾಗಲಿ ಯಾವ ತಪ್ಪನ್ನೂ ಮಾಡಿಲ್ಲ,” ಎಂದನು. 9 ಫೆಸ್ತನು ಯೆಹೂದ್ಯರ ಮೆಚ್ಚುಗೆಯನ್ನು ಗಳಿಸಲು ಬಯಸಿ ಪೌಲನಿಗೆ, “ನೀನು ಯೆರೂಸಲೇಮಿಗೆ ಹೋಗಿ, ಅಲ್ಲಿ ನನ್ನೆದುರಿನಲ್ಲಿ ಈ ದೂರುಗಳ ನ್ಯಾಯವಿಚಾರಣೆಗಾಗಿ ಒಪ್ಪಿಕೊಳ್ಳುವಿಯೋ?” ಎಂದು ಕೇಳಿದನು. 10 ಅದಕ್ಕೆ ಪೌಲನು, “ಈಗ ನಾನು ಕೈಸರನ ನ್ಯಾಯಾಲಯದ ಎದುರಿನಲ್ಲಿ ನಿಂತುಕೊಂಡಿದ್ದೇನೆ. ಇಲ್ಲಿಯೇ ನನ್ನ ವಿಚಾರಣೆಯಾಗತಕ್ಕದ್ದು. ನೀವೇ ಚೆನ್ನಾಗಿ ತಿಳಿದುಕೊಂಡಿರುವಂತೆ ನಾನು ಯೆಹೂದ್ಯರಿಗೆ ವಿರೋಧವಾಗಿ ಯಾವ ತಪ್ಪನ್ನೂ ಮಾಡಿಲ್ಲ. 11 ಆದರೂ ಮರಣಶಿಕ್ಷೆಗೆ ಯೋಗ್ಯವಾದದ್ದೇನಾದರೂ ಮಾಡಿದ ಅಪರಾಧಿ ನಾನಾಗಿದ್ದರೆ, ಸಾಯಲಿಕ್ಕೂ ನಾನು ಹಿಂಜರಿಯುವುದಿಲ್ಲ. ಆದರೆ ಯೆಹೂದ್ಯರು ನನ್ನ ವಿರೋಧವಾಗಿ ತಂದಿರುವ ಆಪಾದನೆಗಳು ಸುಳ್ಳಾದವುಗಳಾದದ್ದರಿಂದ, ನನ್ನನ್ನು ಅವರಿಗೆ ಒಪ್ಪಿಸಲು ಯಾರಿಗೂ ಅಧಿಕಾರವಿಲ್ಲ. ನಾನು ನೇರವಾಗಿ ಕೈಸರನಿಗೇ ಮನವಿ ಮಾಡಿಕೊಳ್ಳುತ್ತೇನೆ,” ಎಂದು ಉತ್ತರಕೊಟ್ಟನು. 12 ಆಗ ಫೆಸ್ತನು ತನ್ನ ನ್ಯಾಯಸಭೆಯೊಂದಿಗೆ ಸಮಾಲೋಚನೆ ಮಾಡಿ, “ನೀನು ಕೈಸರನಿಗೆ ಮನವಿ ಮಾಡಿಕೊಂಡಿರುವೆ, ಕೈಸರನ ಬಳಿಗೇ ಹೋಗು!” ಎಂದು ಉತ್ತರಿಸಿದನು. 13 ಕೆಲವು ದಿನಗಳ ನಂತರ ಫೆಸ್ತನನ್ನು ಅಭಿನಂದಿಸಲು ರಾಜ ಅಗ್ರಿಪ್ಪನು ಬೆರ್ನಿಕೆಯಳೊಂದಿಗೆ ಕೈಸರೈಯಕ್ಕೆ ಬಂದನು. 14 ಅವರು ಅಲ್ಲಿ ಅನೇಕ ದಿನಗಳನ್ನು ಕಳೆಯುತ್ತಿದ್ದಾಗ, ಫೆಸ್ತನು ಪೌಲನ ವಿಷಯವನ್ನು ರಾಜನೊಂದಿಗೆ ಚರ್ಚಿಸಿ, “ಕೈದಿಯಾಗಿ ಫೇಲಿಕ್ಸನು ಬಿಟ್ಟುಹೋದ ಒಬ್ಬ ಮನುಷ್ಯನಿದ್ದಾನೆ. 15 ನಾನು ಯೆರೂಸಲೇಮಿಗೆ ಹೋದಾಗ ಮುಖ್ಯಯಾಜಕರೂ ಹಾಗೂ ಯೆಹೂದ್ಯರ ಹಿರಿಯರೂ ಅವನ ಮೇಲೆ ಆಪಾದನೆಗಳನ್ನು ತಂದು ಅವನಿಗೆ ವಿರೋಧವಾಗಿ ದಂಡನೆ ವಿಧಿಸಬೇಕೆಂದು ಕೇಳಿಕೊಂಡರು. 16 “ಆಪಾದಿತನು ಆಪಾದನೆ ಹೊರಿಸುವವರ ಮುಖಾಮುಖಿಯಾಗಿ ನಿಂತು ತನ್ನ ಮೇಲೆ ಹೊರಿಸಲಾದ ಆಪಾದನೆಗಳಿಗೆ ಪ್ರತಿವಾದ ಮಾಡಿಕೊಳ್ಳುವ ಮೊದಲು ಯಾವ ಮನುಷ್ಯನನ್ನೂ ಒಪ್ಪಿಸಿಕೊಡುವುದು ರೋಮ್ ಪದ್ಧತಿಯಲ್ಲ ಎಂದು ನಾನು ಅವರಿಗೆ ಹೇಳಿದೆನು. 17 ಅವರು ನನ್ನೊಂದಿಗೆ ಇಲ್ಲಿಗೆ ಬಂದದ್ದರಿಂದ ನ್ಯಾಯವಿಚಾರಣೆಯನ್ನು ತಡಮಾಡದೆ ಪ್ರಾರಂಭಿಸಿದೆ. ಮರುದಿನ ನ್ಯಾಯವಿಚಾರಣೆ ನಡೆಸಿ ಪೌಲನೆಂಬ ಆ ಮನುಷ್ಯನನ್ನು ತರಬೇಕೆಂದು ಆಜ್ಞಾಪಿಸಿದೆ. 18 ಅವನ ಮೇಲೆ ಆಪಾದನೆ ಹೊರಿಸುವವರು ಮಾತನಾಡಲು ಎದ್ದು ನಿಂತಾಗ, ನಾನು ಭಾವಿಸಿದ ಯಾವುದೇ ಅಪರಾಧವನ್ನು ಅವರು ಅವನ ಮೇಲೆ ಹೊರಿಸಲಿಲ್ಲ. 19 ಆದರೆ ಅವರಿಗೆ ತಮ್ಮ ಸಂಪ್ರದಾಯದ ಬಗ್ಗೆಯೂ ಸತ್ತು ಹೋಗಿದ್ದ ಯೇಸು ಎಂಬ ಮನುಷ್ಯನು ಜೀವಿಸುತ್ತಿದ್ದಾನೆಂದೂ ಪೌಲ ಹೇಳುವಂಥದ್ದರ ಬಗ್ಗೆ ವಾದವಿವಾದವಿತ್ತು. 20 ನಾನು ಅಂಥಾ ವಿಚಾರಗಳ ಬಗ್ಗೆ ಅವನು ಯೆರೂಸಲೇಮಿಗೆ ಹೋಗಿ ಈ ಆಪಾದನೆಗಳ ಬಗ್ಗೆ ವಿಚಾರಣೆಗೆ ಒಳಗಾಗಲು ಮನಸ್ಸಿದೆಯೋ ಎಂದು ಅವನನ್ನು ಕೇಳಿದೆನು. 21 ಆದರೆ ಪೌಲನು ತನ್ನ ಬೇಡಿಕೆಯನ್ನು ನೇರವಾಗಿ ಕೈಸರನ ಬಳಿಗೆ ಕಳುಹಿಸುವವರೆಗೆ ಅವನನ್ನು ಕಾವಲಲ್ಲಿಡಬೇಕೆಂದು ಆಜ್ಞಾಪಿಸಿದ್ದೇನೆ,” ಎಂದು ಫೆಸ್ತನು ಹೇಳಿದನು. 22 ಆಗ ಅಗ್ರಿಪ್ಪ ರಾಜನು, “ಈ ಮನುಷ್ಯನು ಹೇಳುವುದನ್ನು ನಾನೂ ಕೇಳಬೇಕೆಂದಿದ್ದೇನೆ,” ಎಂದು ಫೆಸ್ತನಿಗೆ ಹೇಳಿದನು.“ನಾಳೆಯೇ ಪೌಲನ ಬೇಡಿಕೆಯನ್ನು ಕೇಳುವಿರಿ,” ಎಂದು ಫೆಸ್ತನು ಉತ್ತರಕೊಟ್ಟನು. 23 ಮರುದಿನ ಅಗ್ರಿಪ್ಪನು ಹಾಗೂ ಬೆರ್ನಿಕೆಯು ಮಹಾ ವೈಭವದಿಂದ ಸೈನ್ಯಾಧಿಕಾರಿಗಳೊಂದಿಗೂ ಪಟ್ಟಣದ ಗಣ್ಯವ್ಯಕ್ತಿಗಳೊಂದಿಗೂ ಆಸ್ಥಾನವನ್ನು ಪ್ರವೇಶಿಸಿದರು. ಫೆಸ್ತನ ಆಜ್ಞೆಯಂತೆ ಪೌಲನನ್ನು ಕರೆದುಕೊಂಡು ಬಂದರು. 24 ಆಗ ಫೆಸ್ತನು, “ಅಗ್ರಿಪ್ಪ ರಾಜನೇ, ನಮ್ಮ ಸಂಗಡ ಇಲ್ಲಿ ಸೇರಿ ಬಂದಿರುವವರೇ, ನೀವು ಕಾಣುತ್ತಿರುವ ಈ ಮನುಷ್ಯನು ಜೀವದಿಂದ ಉಳಿಯಬಾರದೆಂದು ಯೆರೂಸಲೇಮಿನಲ್ಲಿಯೂ ಇಲ್ಲಿಯೂ ಯೆಹೂದ್ಯರೆಲ್ಲರೂ ನನ್ನನ್ನು ಬೇಡಿಕೊಂಡಿದ್ದಾರೆ. 25 ಇವನು ಮರಣದಂಡನೆಗೆ ಯೋಗ್ಯವಾದ ಯಾವುದೇ ಅಪರಾಧ ಮಾಡಿಲ್ಲ ಎಂದು ನಾನು ಕಂಡುಕೊಂಡಿದ್ದೇನೆ. ಆದರೆ ಇವನು ನೇರವಾಗಿ ಚಕ್ರವರ್ತಿಗೇ ತನ್ನ ಬೇಡಿಕೆ ಸಲ್ಲಿಸಿದ್ದರಿಂದ ಇವನನ್ನು ರೋಮ್ ನಗರಕ್ಕೆ ಕಳುಹಿಸಲು ತೀರ್ಮಾನಿಸಿದ್ದೇನೆ. 26 ಆದರೂ ಇವನ ಬಗ್ಗೆ ಖಚಿತವಾಗಿ ತಮಗೆ ಬರೆಯಲು ನನಗೇನು ಇಲ್ಲದಿರುವುದರಿಂದ, ಅಗ್ರಿಪ್ಪ ರಾಜನೇ, ಇವನನ್ನು ತಮ್ಮ ಮುಂದೆ ತಂದಿದ್ದೇನೆ. ಹೀಗೆ ಈ ವಿಚಾರಣೆಯ ಮೂಲಕ ಬರೆಯಲು ನನಗೇನಾದರೂ ಸಿಕ್ಕಬಹುದು. 27 ಏಕೆಂದರೆ ನಿಶ್ಚಿತವಾದ ಅಪರಾಧಗಳನ್ನು ಸೂಚಿಸದೆ ಒಬ್ಬ ಸೆರೆಯಾಳನ್ನು ಕಳುಹಿಸುವುದು ಸರಿಯಲ್ಲ ಎಂದು ನನಗನಿಸುತ್ತದೆ,” ಎಂದನು.